ಅಕ್ಷಯ ತೃತೀಯ ಹಿನ್ನೆಲೆ: ಭರ್ಜರಿ ಚಿನ್ನದ ವಹಿವಾಟು

ಬೆಂಗಳೂರು, ಮೇ 7: ‘ಲೋಹಗಳ ಚಕ್ರವರ್ತಿ ಚಿನ್ನ’ ಎಂಬುದು ಮತ್ತೆ ಸಾಬೀತಾಗಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ.
ಬೆಳಗ್ಗೆ ಸುಮಾರು 6.30ರಿಂದಲೇ ಆಭರಣ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಲವೆಡೆ ರಾತ್ರಿ 9ರವರೆಗೂ ನಡೆಯಿತು. ಕೆಲವೆಡೆ ಅದಕ್ಕೂ ಹೆಚ್ಚಿನ ಸಮಯದವರೆಗೂ ಖರೀದಿ ನಡೆಯಿತು. ಹಲವು ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಮತ್ತೆ ಕೆಲವೆಡೆ ಮೊದಲೇ ಖರೀದಿಸಿಟ್ಟು, ಈ ದಿನ ಮನೆಗೊಯ್ಯುತ್ತಿದ್ದರು. ಇನ್ನು ಕೆಲವೆಡೆ ಅಕ್ಷಯ ತೃತೀಯಕ್ಕೆ ಖರೀದಿಸಲೆಂದೇ ಹಾಕಿದ್ದ ‘ಗೋಲ್ಡ್ ಚೀಟಿ’ಗಳ ಮೂಲಕವೂ ಖರೀದಿಸಿದರು.
ಚಿನ್ನಾಭರಣ ಮಳಿಗೆಗಳು ತಳಿರು-ತೋರಣಗಳಿಂದ ಶೃಂಗರಿಸಿಕೊಂಡಿದ್ದವು. ಅಕ್ಷಯ ತೃತೀಯದ ಉಡುಗೊರೆಗಳು ಆಕರ್ಷಕ ಫಲಕಗಳಲ್ಲಿ ರಾರಾಜಿಸುತ್ತಿದ್ದವು. ಖರೀದಿಸಲು ಬಿಸಿಲಲ್ಲಿ ದಣಿದು ಬಂದ ಗ್ರಾಹಕರಿಗೆ ಹೊರ ಭಾಗದಲ್ಲೇ ಮಜ್ಜಿಗೆ ಮತ್ತಿತರ ತಂಪು ಪಾನೀಯಗಳನ್ನು ಕೊಟ್ಟು ಗ್ರಾಹಕರನ್ನು ಸಂತುಷ್ಟಗೊಳಿಸಲಾಗುತ್ತಿತ್ತು. ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಗ್ರಾಹಕರಿಗೆ ಚಿನ್ನದ ನಾಣ್ಯಗಳು, ಹಾಗೂ ಇತರರಿಗೆ ಬೆಳ್ಳಿ ನಾಣ್ಯಗಳು, ಕುಬೇರ-ಲಕ್ಷ್ಮಿಯಿರುವ ಬೆಳ್ಳಿ ಲೇಪನದ ದೇವರ ಫೋಟೊಗಳು, ದರದಲ್ಲಿ ರಿಯಾಯಿತಿ ಹೀಗೆ ನಾನಾ ಉಡುಗೊರೆಗಳನ್ನು ನೀಡಲಾಗಿತ್ತು.
ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾಕಾರಿಗಳು ಹಲವು ಪ್ರತಿಷ್ಠಿತ ಮಳಿಗೆಗಳ ಮುಂಭಾಗದಲ್ಲಿ ಕ್ಯಾಮೆರಾ ಹಿಡಿದು ವಿಡಿಯೋ ಮಾಡುತ್ತಿದ್ದರು. ಆದರೆ ಗ್ರಾಹಕರು ಖರೀದಿಸಿದ ಆಭರಣಕ್ಕೆ ಪಾರದರ್ಶಕವಾಗಿ ಒಂದೊಂದು ರೂಪಾಯಿಗೆ ಬಿಲ್ ಕೊಡುವ ಮಳಿಗೆಗಳ ಮುಂದೆ ನಿಂತು ಚುನಾವಣಾಧಿಕಾರಿಗಳು ನಿಂತಿದ್ದರೇ ಹೊರತು, ಸಣ್ಣ-ಪುಟ್ಟ ಮಳಿಗೆಗಳ ಮೂಲಕ ಮನೆಗಳಿಗೇ ಆಭರಣ ತಲುಪಿಸಿದ್ದನ್ನು ಚುನಾವಣಾಧಿಕಾರಿಗಳು ಹಿಡಿಯಲಿಲ್ಲ.







