ಅಫ್ರಿದಿ ಸ್ವಾರ್ಥಿ ಆಟಗಾರ

ಲಾಹೋರ್, ಮೇ 7: ಶಾಹಿದ್ ಅಫ್ರಿದಿ ತನ್ನ ಸ್ವಾರ್ಥಕ್ಕಾಗಿ ಇತರ ಆಟಗಾರರ ವೃತ್ತಿಜೀವನವನ್ನು ನಾಶ ಮಾಡಿದ್ದಾರೆ ಎಂದು ಪಾಕಿಸ್ತಾನ ಮಾಜಿ ಆರಂಭಿಕ ಆಟಗಾರ ಇಮ್ರಾನ್ ಫರ್ಹಾತ್ ಟೀಕಿಸಿದ್ದಾರೆ.
ಅಫ್ರಿದಿ ಅವರ ‘ಗೇಮ್ ಚೇಂಜರ್’ಎಂಬ ಆತ್ಮಚರಿತ್ರೆ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್, ತನ್ನ ವಯಸ್ಸಿನ ಕುರಿತು ಕಳೆದ 20 ವರ್ಷಗಳಿಂದ ಸುಳ್ಳನ್ನು ಹೇಳುತ್ತಾ ಬಂದಿರುವ ಅಫ್ರಿದಿ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರ ಘನತೆಗೆ ಧಕ್ಕೆ ತಂದಿದ್ದಾರೆ ಎಂದರು.
ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ತಾನು ಮೊದಲ ಶತಕ ಗಳಿಸಿದ್ದಾಗ ತನ್ನ ವಯಸ್ಸು 16 ಆಗಿರಲಿಲ್ಲ. ಆಗ ತನಗೆ 20 ವರ್ಷ ವಯಸ್ಸಾಗಿತ್ತು ಎಂದು ಬಹಿರಂಗಪಡಿಸಿದ್ದರು.
ಸರಣಿ ಟ್ವೀಟ್ ಮಾಡಿರುವ ಇಮ್ರಾನ್, ಶಾಹಿದ್ ಅಫ್ರಿದಿ ಬಗ್ಗೆ ಸತ್ಯವನ್ನು ಹೊರಹಾಕಿ ಎಂದು ಪಾಕಿಸ್ತಾನ ಕ್ರಿಕೆಟಿಗರನ್ನು ವಿನಂತಿಸಿದ್ದಾರೆ.
‘‘ಅಫ್ರಿದಿ ಅವರ ಹೊಸ ಪುಸ್ತಕದ ಬಗ್ಗೆ ಕೇಳಿ, ಅದನ್ನು ಓದಿದ ಬಳಿಕ ನಾನು ತುಂಬಾ ಸಂಕೋಚಗೊಂಡೆ. 20 ವರ್ಷಗಳಿಂದ ತನ್ನ ವಯಸ್ಸನ್ನು ತಪ್ಪಾಗಿ ಹೇಳುತ್ತಿದ್ದ ವ್ಯಕ್ತಿ ಇದೀಗ ತಾನು ಸಭ್ಯನಂತೆ ವರ್ತಿಸುತ್ತಿದ್ದು, ನಮ್ಮ ದಿಗ್ಗಜ ಆಟಗಾರರನ್ನು ನಿಂದಿಸತೊಡಗಿದ್ದಾರೆ’’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ಎಲ್ಲ ಕ್ರಿಕೆಟಿಗರ ಬಗ್ಗೆ ಹೇಳಿರುವ ವಿಷಯವೆಲ್ಲವೂ ಸತ್ಯವಲ್ಲ. ಎಲ್ಲ ಕೆಟ್ಟದರ ಹಿಂದೆ ಅವರಿದ್ದಾರೆ. ಸ್ವಾರ್ಥಕ್ಕಾಗಿ ಎಲ್ಲದರಿಂದ ಬಚಾವಾಗುತ್ತಿದ್ದರು ಎಂದು ಪಾಕ್ ಪರ 40 ಟೆಸ್ಟ್ ಹಾಗೂ 50 ಏಕದಿನ ಪಂದ್ಯಗಳನ್ನು ಆಡಿರುವ ಎಡಗೈ ದಾಂಡಿಗ ಫರ್ಹಾತ್ ಹೇಳಿದ್ದಾರೆ.







