ಅನಾರೋಗ್ಯ ಪೀಡಿತ ಆರ್ಚರಿ ಲೆಜೆಂಡ್ ಲಿಂಬಾ ರಾಮ್‌ಗೆ ಕೇಂದ್ರದ ನೆರವು

ಹೊಸದಿಲ್ಲಿ, ಮೇ 7: ಅನಾರೋಗ್ಯ ಪೀಡಿತರಾಗಿ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಭಾರತದ ಆರ್ಚರಿ ದಂತಕತೆ ಲಿಂಬಾ ರಾಮ್‌ಗೆ ಹೆಚ್ಚುವರಿ 5 ಲಕ್ಷ ರೂ. ವೈದ್ಯಕೀಯ ವಿಮೆ ಲಭಿಸಿದೆ. ಹೆಚ್ಚುವರಿ ಹಣವನ್ನು ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಲಿದೆ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಭಾರತೀಯ ಕ್ರೀಡೆಯ ಓರ್ವ ದಂತಕತೆಯಾಗಿರುವ 46ರ ಹರೆಯದ ಲಿಂಬಾ ತನ್ನ ಹೆಸರಿನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಮಾರಣಾಂತಿಕ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಣಕಾಸು ನೆರವಿನ ನಿರೀಕ್ಷೆಯಲ್ಲಿದ್ದರು. 1992ರ ಬಾರ್ಸಿಲೋನ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಲಿಂಬಾ ನರಕ್ಷೀಣಗೊಳಿಸುವ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದು ಏಮ್ಸ್‌ನ ಆರು ಹಾಸಿಗೆಯ ಸಾಮಾನ್ಯ ವಿಭಾಗದ ವಾರ್ಡ್ ನಲ್ಲಿ ದಾಖಲಾಗಿದ್ದರು.
ಲಿಂಬಾಗೆ ಮೆದುಳು-ನರಮಂಡಲಕ್ಕೆ ಸಂಬಂಧಿಸಿದ ರೋಗವಿರುವ ಲಕ್ಷಣವಿದೆ. ಆದರೆ, ಇನ್ನಷ್ಟು ಪರೀಕ್ಷೆ ಹಾಗೂ ಸ್ಕಾನಿಂಗ್‌ಗಳಿಂದ ಇದು ದೃಢಪಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಶಸ್ತ್ತಚಿಕಿತ್ಸೆಯ ಅಗತ್ಯವಿದೆ. ಆದರೆ, ಎಲ್ಲವೂ ಹೆಚ್ಚಿನ ವೈದ್ಯಕೀಯ ಪರೀಕ್ಷೆಯನ್ನು ಅವಲಂಬಿತವಾಗಿದೆಎಂದು ಲಿಂಬಾರನ್ನು ಪರೀಕ್ಷಿಸಿದ ವೈದ್ಯರುಗಳು ತಿಳಿಸಿದ್ದಾರೆ.
‘‘ನನ್ನ ಪತಿಗೆ ಬಂದಿರುವ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಅದನ್ನು ನಿಯಂತ್ರಿಸಬಹುದೆಂದು ವೈದ್ಯರು ಹೇಳಿದ್ದಾರೆ. ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಇಲ್ಲಿ ಅವರಿಗೆ ಎಲ್ಲ ವೈದ್ಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’’ ಲಿಂಬಾ ಅವರ ಪತ್ನಿ ಮೆರಿಯನ ಹೇಳಿದ್ದಾರೆ.







