ರಮ್ಯಾ ವಿರುದ್ಧ ಮಾನಹಾನಿ ವರದಿ ಪ್ರಕಟ: ಏಷ್ಯಾನೆಟ್, ಸುವರ್ಣ ನ್ಯೂಸ್ ಗೆ 50 ಲಕ್ಷ ರೂ. ದಂಡ

ಬೆಂಗಳೂರು, ಮೇ 8: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಟಿ, ರಾಜಕಾರಣಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಏಷ್ಯಾನೆಟ್ ಮತ್ತು ಸುವರ್ಣ ಸುದ್ದಿ ವಾಹಿನಿಗೆ ಬೆಂಗಳೂರು ಸಿವಿಲ್ ಕೋರ್ಟ್ 50 ಲಕ್ಷ ದಂಡ ವಿಧಿಸಿದೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಈ ಸುದ್ದಿ ವಾಹಿನಿ ಕಾರ್ಯಕ್ರಮ ಪ್ರಸಾರ ಮಾಡಿದ್ದು, ಇದರ ವಿರುದ್ಧ ರಮ್ಯಾ ಮಾನಹಾನಿ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮ್ಯಾಚ್ ಫಿಕ್ಸಿಂಗ್‌ನಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಬಿಂಬಿಸುವ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಸುದ್ದಿವಾಹಿನಿಗೆ ತಾಕೀತು ನೀಡಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ 2013ರ ಮೇ ತಿಂಗಳಲ್ಲಿ ಕನ್ನಡದ ನಟ್ಟಿಯೊಬ್ಬರು ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಅದರಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದ ರಮ್ಯಾ ಅವರ ಫೋಟೊವನ್ನು ತೋರಿಸಲಾಗಿತ್ತು. ಆದರೆ, 2013ರಲ್ಲಿ ತಾನು ಯಾವುದೇ ರೀತಿಯಲ್ಲಿ ಐಪಿಎಲ್ ಜೊತೆ ಸಂಬಂಧ ಹೊಂದಿರಲಿಲ್ಲ, ಆ ಹೊತ್ತಲ್ಲಿ ನಾನು ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ ಎಂದು ರಮ್ಯಾ ಹೇಳಿದ್ದರು.
ನಾನು ಹಗರಣವೊಂದರಲ್ಲಿ ಭಾಗಿಯಾಗಿದ್ದೇನೆ ಎಂದು ಸುಖಾಸುಮ್ಮನೆ ಆರೋಪ ಮಾಡಿದ್ದಕ್ಕಾಗಿ ರಮ್ಯಾ ಸುವರ್ಣವಾಹಿನಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಮ್ಯಾರ ಪರ ಪ್ರಮೋದ್ ನಾಯರ್ ಅವರು ವಾದ ಮಂಡಿಸಿದರೆ, ಸುವರ್ಣ ಚಾನೆಲ್ ಪರ ಪೂವಯ್ಯ ಅವರು ವಾದ ಮಂಡಿಸಿದ್ದರು. ಪಾಟೀಲ್ ನಾಗಲಿಂಗನಗೌಡ ಅವರು ತೀರ್ಪು ನೀಡಿದ ನ್ಯಾಯಾಧೀಶರಾಗಿದ್ದಾರೆ.
ಕೋರ್ಟ್ ಸರಿಯಾದ ಪಾಠ ಕಲಿಸಿದೆ
‘ಕೀಳು ಮಟ್ಟದ ರೋಚಕತೆ, ಟಿಆರ್‌ಪಿ ಮತ್ತು ಬಿಜೆಪಿ ಪರ ಸುದ್ದಿ ಮಾಡುವ ದುರುದ್ದೇಶದೊಂದಿಗೆ ಇಂತಹ ಸುದ್ದಿಗಳನ್ನು ಚಾನೆಲ್‌ಗಳು ಪ್ರಕಟಿಸುತ್ತವೆ. ಈ ಪ್ರಕರಣದಲ್ಲಿ ಸದರಿ ಚಾನೆಲ್ ಬಳಸಿರುವ ಶೀರ್ಷಿಕೆಗಳೆ ಆ ಚಾನೆಲ್‌ನ ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಕೋರ್ಟ್ ಸರಿಯಾದ ಪಾಠ ಕಲಿಸಿದೆ. ಇದೇ ರೀತಿ ಸುದ್ದಿ ಪ್ರಕಟಿಸುತ್ತಿರುವ ಉಳಿದ ಚಾನೆಲ್‌ಗಳಿಗೂ ದೊಡ್ಡ ಪಾಠವಾಗಲಿದೆ. ಮುಂದಾದರೂ ಈ ಚಾನೆಲ್‌ಗಳು ಬುದ್ದಿ ಕಲಿಯುತ್ತಾರ ನೋಡಬೇಕು.
-ರಾಜಲಕ್ಷ್ಮಿ ಅಂಕಲಗಿ, ಸಿಟಿ ಸಿವಿಲ್ ಕೋರ್ಟ್ ವಕೀಲೆ







