ಚಿಂಚೋಳಿ ಉಪ ಚುನಾವಣೆ: ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕರಿಗೆ ಗ್ರಾಮಸ್ಥರ ಘೇರಾವ್

ಕಲಬುರಗಿ, ಮೇ 8: ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಗ್ರಾಮಕ್ಕೆ ಬಂದ ಬಿಜೆಪಿ ಶಾಸಕರಿಗೆ ಗ್ರಾಮಸ್ಥರು ಘೇರಾವ್ ಹಾಕಿ ‘ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ನೈತಿಕತೆ ಇಲ್ಲ, ಮೊದಲು ಇಲ್ಲಿಂದ ವಾಪಸ್ ಹೋಗಿ’ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿನ ಮೋಘಾ ಗ್ರಾಮದಲ್ಲಿ ನಡೆಸಿದೆ.
ಬುಧವಾರ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ಪ್ರಚಾರ ನಡೆಸಲು ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಸುನೀಲ್ ವಲ್ಯಾಪುರೆ ಸೇರಿ ಇನ್ನಿತರರು ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ‘ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಪಕ್ಷ ತೊರೆಯಲು ಯಾವುದೇ ಕಾರಣವೂ ಇರಲಿಲ್ಲ. ಇದೀಗ ಅವರ ಪುತ್ರನನ್ನು ಕಣಕ್ಕಿಳಿಸಿ ಉಪ ಚುನಾವಣೆಗೂ ಕಾರಣರಾಗಿದ್ದಾರೆ. ಹೀಗಾಗಿ ಅವರ ಪರ ನೀವು ಪ್ರಚಾರ ನಡೆಸುವ ಯಾವುದೇ ನೈತಿಕತೆಯೂ ಇಲ್ಲ, ಮೊದಲು ಇಲ್ಲಿಂದ ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಮುಜುಗರಕ್ಕೆ ಒಳಗಾದ ಮುಖಂಡರು ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವೂ ಆಗಲಿಲ್ಲ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಬಿಜೆಪಿ ಮುಖಂಡರು ಗ್ರಾಮದಲ್ಲಿದ್ದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಿಂದಿರುಗಿದರು ಎಂದು ಗೊತ್ತಾಗಿದೆ.
‘ಎರಡು ಬಾರಿ ಉಮೇಶ್ ಜಾಧವ್‌ಗೆ ಮತ ಹಾಕಿದ್ದೇವೆ, ಅವರು ಕಾರಣವಿಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆಂದು ಸ್ಪಷ್ಟಪಡಿಸಲಿ. ಮತ ಹಾಕಿದ ಜನರಿಗೆ ಮೋಸ ಮಾಡಿದ ಜಾಧವ್ ಪರವಾಗಿ ಗ್ರಾಮಕ್ಕೆ ಮತ ಕೇಳುವ ಹಕ್ಕು ನಿಮಗಿಲ್ಲ’
-ಮೋಘಾ ಗ್ರಾಮಸ್ಥರು







