ಅಸ್ಸಾಂ ಎನ್‌ಆರ್‌ಸಿ ಪಟ್ಟಿ ಗಡು ವಿಸ್ತರಣೆ ಇಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮೇ 8: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯನ್ನು ಅಂತಿಮಗೊಳಿಸುವ ಜುಲೈ 31ರ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ ತಪ್ಪಾಗಿ ಬಿಟ್ಟು ಹೋಗಿರುವ ಅಥವಾ ಒಳಗೊಂಡಿರುವ ಬಗೆಗಿನ ಜನರ ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪ ನಿರ್ವಹಿಸಲು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಸಂಯೋಜಕ ಪ್ರತೀಕ್ ಹಜೇಲಾ ಅವರಿಗೆ ಮುಕ್ತ ಅವಕಾಶವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಆರ್.ಎನ್. ನಾರಿಮನ್ ಅವರನ್ನು ಒಳಗೊಂಡ ಪೀಠ ನೀಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಕರಡಿನಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಒಳಗೊಳಿಸಿರುವುದನ್ನು ಹಲವರು ಆಕ್ಷೇಪಿಸಿದ್ದಾರೆ.
ಆದರೆ, ಇಂತಹ ದೂರುಗಳ ವಿಚಾರಣೆ ನಡೆಸುವ ಸಮಿತಿಯ ಮುಂದೆ ಅವರು ಹಾಜರಾಗಿಲ್ಲ ಎಂದು ಹಜೇಲಾ ಮಾಹಿತಿ ನೀಡಿದ ಬಳಿಕ ಪೀಠ ಈ ಸೂಚನೆ ನೀಡಿದೆ. 2018 ಜುಲೈ 30ರಂದು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಬಿಡುಗಡೆಗೊಳಿಸಲಾಗಿತ್ತು. 3.29 ಕೋಟಿ ಜನರಲ್ಲಿ 2.29 ಕೋಟಿ ಜನರು ಹೆಸರನ್ನು ಈ ಪಟ್ಟಿ ಒಳಗೊಂಡಿತ್ತು. 40,70,707 ಜನರು ಈ ಪಟ್ಟಿಯಿಂದ ಹೊರಗುಳಿದಿದ್ದರು.





