ಯುವಕರಲ್ಲಿ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು: ಸಿ.ಎಂ.ಫೈಝ್ ಮುಹಮ್ಮದ್

ಬೆಂಗಳೂರು, ಮೇ 8: ಯುವಕ, ಯುವತಿಯರು ಪದವಿ ಪಡೆದು ಉತ್ತೀರ್ಣರಾಗುವುದಷ್ಟೇ ಅಲ್ಲ, ಶಿಕ್ಷಣ ಪೂರೈಸುತ್ತಿದ್ದಂತೆ ಅವರಿಗೆ ಉದ್ಯೋಗ ಅವಕಾಶಗಳು ಸಿಗಬೇಕು. ಆದುದರಿಂದ, ನಾವು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸಿ.ಎಂ.ಫೈಝ್ ಮುಹಮ್ಮದ್ ತಿಳಿಸಿದರು.
ಬುಧವಾರ ಗೋವಿಂದಪುರದಲ್ಲಿರುವ ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ಹತ್ತಾರು ಲಕ್ಷ ಯುವಕರು ಎಂಜಿನಿಯರಿಂಗ್ ಪದವಿ ಪಡೆದು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಆದರೆ, ಶೇ.20ರಷ್ಟು ಮಂದಿಗೆ ಮಾತ್ರ ಉದ್ಯೋಗಾವಕಾಶಗಳು ಸಿಗುತ್ತಿವೆ ಎಂದರು.
ನಮ್ಮ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಶೇ.65-70ರಷ್ಟು ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತಿವೆ. ಈ ಸಂಬಂಧ ನಾವು ಟೆಕ್ಸಾಸ್, ಡೆಲ್, ಟಿಸಿಎಸ್, ಇನ್ಫೋಸಿಸ್, ಇಂಟೆಲ್ ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 70ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಂಡಿದ್ದವು ಎಂದು ಅವರು ಹೇಳಿದರು.
ನೋಡಲ್ ಕೇಂದ್ರ: ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಮ್ಮ ಕಾಲೇಜನ್ನು ನೋಡಲ್ ಕೇಂದ್ರವನ್ನಾಗಿ ಮಾಡಲಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಮಾನ್ಯತೆ ಹೊಂದಿರುವ ನಮಗೆ ಇದೊಂದು ಹೆಮ್ಮೆಯ ಸಂಗತಿ ಎಂದು ಫೈಝ್ ಮುಹಮ್ಮದ್ ತಿಳಿಸಿದರು.
ಪೋಷಕರ ಒತ್ತಡಕ್ಕೆ ಮಣಿದು ಹಲವಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ, ಅವರಿಗೆ ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಆಸಕ್ತಿಯಿದ್ದಲ್ಲಿ, ಮಾರ್ಗದರ್ಶನ ನೀಡಲು ಕಾಲೇಜಿನಲ್ಲಿ ವಿವಿಧ ಕ್ಲಬ್‌ಗಳನ್ನು ರಚಿಸಲಾಗಿದ್ದು, ಈಗಾಗಲೇ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಫೈಝ್ ಮುಹಮ್ಮದ್ ತಿಳಿಸಿದರು.
ನೀಟ್, ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದೇವೆ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮಾನ್ಯತೆ ಹೊಂದಿರುವ ನಮ್ಮ ಸಂಸ್ಥೆಯು ಸರಾಸರಿ ಶೇ.98ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲೆ ಉತ್ತಮ ಸ್ಥಾನದಲ್ಲಿದೆ ಎಂದು ಕಾಲೇಜಿನ ಕಾರ್ಯದರ್ಶಿ ಮನ್ಝೂರ್ ಅಹ್ಮದ್ ತಿಳಿಸಿದರು.
ಎಚ್‌ಕೆಬಿಕೆ ಕಾಲೇಜಿನಲ್ಲಿ ಯಮನ್, ಸಿಂಗಾಪುರ, ಆಫ್ರಿಕಾ ಸೇರಿದಂತೆ ಸುಮಾರು 16 ರಾಷ್ಟ್ರಗಳ 116 ಹಾಗೂ ಹೊರ ರಾಜ್ಯಗಳ 600 ವಿದ್ಯಾರ್ಥಿಗಳು ಈ ಪ್ರವೇಶ ಪಡೆದಿದ್ದಾರೆ. ನಮ್ಮಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು, ದೇಶ-ವಿದೇಶಗಳಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿದರು.







