ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಡಾ. ಮಾಧವ ಮೆನನ್ ನಿಧನ

ತಿರುವನಂತಪುರ, ಮೇ 8: ಭಾರತದ ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಎಂದು ಪರಿಗಣಿಸಲಾಗುವ ಡಾ. ಮಾಧವ ಮೆನನ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಅವರು ಪಶ್ಚಿಮಬಂಗಾಳದ ನ್ಯಾಶನಲ್ ಯುನಿವರ್ಸಿಟಿ ಆಫ್ ಜುರಿಡಿಕಲ್ ಸಯನ್ಸ್ನ ಸ್ಥಾಪಕ ಉಪ ಕುಲಪತಿಯಲ್ಲದೆ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಗೂ ಭೋಪಾಲ ನ್ಯಾಶನಲ್ ಜುಡೀಷಿಯಲ್ ಅಕಾಡೆಮಿಯ ಸ್ಥಾಪಕ ನಿರ್ದೇಶಕರಾಗಿದ್ದರು. 1956ರಲ್ಲಿ ಕೇರಳ ಹೈಕೋರ್ಟ್ನ ವಕೀಲರಾಗಿ ಅವರು ವೃತ್ತಿ ಜೀವನ ಆರಂಭಿಸಿದ್ದರು. ಅನಂತರ ಅವರು ದಿಲ್ಲಿಗೆ ಸ್ಥಳಾಂತರಗೊಂಡರು. 1960ರಲ್ಲಿ ಅವರು ಅಲಿಗಢ ಮುಸ್ಲಿಂ ವಿ.ವಿ.ಯಲ್ಲಿ, ಅನಂತರ 1965ರಲ್ಲಿ ದಿಲ್ಲಿ ವಿ.ವಿ.ಯಲ್ಲಿ ಕಾನೂನು ಬೋಧಕರಾಗಿ ಸೇವೆ ಸಲ್ಲಿಸಿದರು.
ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಆರಂಭಿಸಲು ಹಾಗೂ ಅಲ್ಲಿ ನೂತನ ಮಾದರಿಯ ಅಂದರೆ, 5 ವರ್ಷಗಳ ಸಮಗ್ರ ಎಲ್ಎಲ್ಬಿ ಯೋಜನೆ ಪರಿಚಯಿಸಲು ಬಾರ್ ಕೌನ್ಸಿಲ್ನ ಆಹ್ವಾನದ ಮೇರೆಗೆ 1986ರಲ್ಲಿ ಮೆನನ್ ಬೆಂಗಳೂರಿಗೆ ತೆರಳಿದ್ದರು. ನಿವೃತ್ತಿಯ ನಂತರ ಅವರು ತಿರುವನಂತಪುರದಲ್ಲಿ ನೆಲೆಸಿದ್ದರು.