ಚುನಾವಣಾ ಪ್ರವಾಸಕ್ಕೆ ಐಎಎಫ್ ಜೆಟ್ ಗಳನ್ನು ಬಳಸಿದ್ದ ಮೋದಿ: ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪ
“ಬಲಂಗೀರ್ ಪ್ರವಾಸಕ್ಕಾಗಿ ಐಎಎಫ್ ಗೆ ಕೇವಲ 744 ರೂ. ಪಾವತಿ”

ಹೊಸದಿಲ್ಲಿ, ಮೇ 9: “ಗಮನ ಬೇರೆಡೆ ಸೆಳೆಯುವುದು ಹಾಗೂ ಸುಳ್ಳು ಹೇಳುವುದು ನಿಮ್ಮ ಕೊನೆಯ ಅಸ್ತ್ರ. ನೀವು ಭಾರತೀಯ ವಾಯುಪಡೆಯ ಜೆಟ್ ಗಳನ್ನು ನಿಮ್ಮ ಸ್ವಂತ ಟ್ಯಾಕ್ಸಿಯನ್ನಾಗಿಸಿದ್ದೀರಿ. ಚುನಾವಣಾ ಪ್ರವಾಸಗಳಿಗಾಗಿ ಐಎಎಫ್ ಜೆಟ್ ಗಳನ್ನು ಬಳಸಿದ್ದಕ್ಕಾಗಿ ನೀವು 744 ರೂ.ಗಿಂತ ಕಡಿಮೆ ಹಣ ಪಾವತಿಸಿದ್ದೀರಿ !'' ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿ ಮೋದಿಯ ವಿರುದ್ಧ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಕಿಡಿ ಕಾರಿದ್ದಾರೆ.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕುಟುಂಬದೊಂದಿಗೆ ಖಾಸಗಿ ಪ್ರವಾಸಕ್ಕಾಗಿ ಐಎನ್ಎಸ್ ವಿರಾಟ್ ಅನ್ನು `ಖಾಸಗಿ ಟ್ಯಾಕ್ಸಿ'ಯಾಗಿ ಬಳಸಿದ್ದಾರೆಂದು ಪ್ರಧಾನಿ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುರ್ಜೇವಾಲ ಮೇಲಿನಂತೆ ಹೇಳಿದ್ದಾರೆ.
“ನಿಮ್ಮ ಪಾಪಗಳೇ ನಿಮ್ಮನ್ನು ಬೆಂಬತ್ತುತ್ತಿರುವ ಬಗ್ಗೆ ನಿಮಗೆ ಭಯವಾಗಿದೆ, ನೀವು ಲಜ್ಜೆಗೆಟ್ಟು ಇತರರತ್ತ ಬೆರಳು ತೋರಿಸುತ್ತಿದ್ದೀರಿ” ಎಂದು ಅವರು ಹೇಳಿದರು.
ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಂದಿನಿಂದ ಜನವರಿ 2019ರ ತನಕ 240 ಅನಧಿಕೃತ ದೇಶೀಯ ಪ್ರವಾಸಗಳಿಗಾಗಿ ಬಿಜೆಪಿ ಭಾರತೀಯ ವಾಯುಪಡೆಗೆ ರೂ 1.4 ಕೋಟಿ ಪಾವತಿಸಿದೆಯೆಂದು ಆರ್ಟಿಐ ಮಾಹಿತಿಯಿಂದ ತಿಳಿದು ಬಂದಿದೆಯೆಂದು ಸುರ್ಜೇವಾಲ ಉಲ್ಲೇಖಿಸಿದ ಮಾಧ್ಯಮ ವರದಿ ತಿಳಿಸಿದೆ.
“ಕೆಲ ಪ್ರಕರಣಗಳಲ್ಲಿ ಪಾವತಿಸಿದ ಹಣ ಅತ್ಯಲ್ಪವಾಗಿದೆ. ಉದಾಹರಣೆಗೆ ಮೋದಿ ಜನವರಿ 15, 2019ರಂದು ಕೈಗೊಂಡ ಎಚ್/ಪಿ ಬಲಂಗೀರ್-ಎಚ್/ಪಿ ಪಥರ್ಚೆರಾ ಪ್ರವಾಸಕ್ಕಾಗಿ ಬಿಜೆಪಿ 744 ರೂ. ನೀಡಿತ್ತು'' ಎಂದು ವರದಿ ತಿಳಿಸಿತ್ತು.