ನಾಮಪತ್ರ ತಿರಸ್ಕಾರ ಪ್ರಶ್ನಿಸಿ ತೇಜ್‌ಬಹದ್ದೂರ್ ಸಲ್ಲಿಸಿದ್ದ ಅರ್ಜಿ ವಜಾ

ಹೊಸದಿಲ್ಲಿ, ಮೇ 9: ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಕಣಕ್ಕೆ ಇಳಿದಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್, ತನ್ನ ನಾಮಪತ್ರ ತಿರಸ್ಕೃತಗೊಂಡಿರುವ ಬಗ್ಗೆ ನೀಡಿರುವ ದೂರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ತೇಜ್‌ಪ್ರತಾಪ್ ಯಾದವ್ ನಾಮಪತ್ರ ಸಲ್ಲಿಕೆಯ ಸಂದರ್ಭ ಅಗತ್ಯ ದಾಖಲೆಗಳನ್ನು ಲಗತ್ತಿಸಿಲ್ಲ ಎಂದು ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಿದ್ದರು. ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಕಳೆದ ಐದು ವರ್ಷದೊಳಗೆ ಸೇವೆಯಿಂದ ವಜಾಗೊಂಡಿರುವ ಸರಕಾರಿ ಉದ್ಯೋಗಿ ಭ್ರಷ್ಟಾಚಾರ ಅಥವಾ ರಾಜದ್ರೋಹದ ಕಾರಣದಿಂದ ತನ್ನನ್ನು ವಜಾಗೊಳಿಸಿಲ್ಲ ಎಂಬ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಿದೆ. ಇದನ್ನು ನಾಮಪತ್ರದ ಜೊತೆ ತೇಜ್‌ಬಹದ್ದೂರ್ ಸಲ್ಲಿಸದ ಕಾರಣ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದರು.
ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ ಎಂದು ವೀಡಿಯೊ ಮೂಲಕ ಆರೋಪ ಮಾಡಿದ್ದ ಕಾರಣಕ್ಕೆ 2017ರಲ್ಲಿ ತೇಜ್‌ಪ್ರತಾಪ್‌ರನ್ನು ಸೇನಾಪಡೆಯಿಂದ ವಜಾಗೊಳಿಸಲಾಗಿದೆ. ವಾರಣಾಸಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ತೇಜ್‌ಬಹದ್ದೂರ್‌ಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿತ್ತು.





