ರಮ್ಯಾ ವಿರುದ್ಧ ಅಶ್ಲೀಲ ಪೋಸ್ಟ್: ಮಾಜಿ ಪತ್ರಕರ್ತನ ವಿರುದ್ಧ ದೂರು ದಾಖಲು

ನವೀನ್ ಸಾಗರ್
ಬೆಂಗಳೂರು, ಮೇ 9: ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ವಿಶ್ವವಾಣಿ ಪತ್ರಿಕೆಯ ಮಾಜಿ ಪತ್ರಕರ್ತ ನವೀನ್ ಸಾಗರ್ ಮೇಲೆ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಕೀಲೆ ಎಚ್.ಭವ್ಯ ಅನು ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್ ಹಾಕಿ ಅಶ್ಲೀಲ ಪದಗಳಿಂದ ನಿಂದನೆ ಮಾಡಲು ನವೀನ್ ಸಾಗರ್ ಪ್ರಚೋದನೆ ನೀಡಿರುತ್ತಾರೆ. ಮಹಿಳೆಯ ಚಿತ್ರವನ್ನು ವಿಕೃತವಾಗಿ ತೇಜೋವಧೆ ಮಾಡಲು ಸಾಮಾಜಿಕ ತಾಣದಲ್ಲಿ ಬಳಸಿಕೊಂಡು ಘನತೆಗೆ ಧಕ್ಕೆ ತಂದಿರುವ ನವೀನ್ ಸಾಗರ್ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಭವ್ಯ ಅನು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?: ನವೀನ್ ಸಾಗರ್ ಎಂಬ ಫೇಸ್ಬುಕ್ ಖಾತೆಯಲ್ಲಿ ನಟಿ ರಮ್ಯಾ ಚಿತ್ರವನ್ನು ಹಾಕಿ ‘ಮೋದಿಯೇನೋ ಚಿಕ್ಕ ಹುಡುಗನ ಕಿವಿ ಎಳೆದ್ರು. ಆಯ್ತು ನಿನ್ ಮಾತ್ ಒಪ್ಕಳಣ. ಆದ್ರೆ ನೀನ್ ಈ ವಯ್ಸ್ಗೆ ಹುಡ್ಗನ ಜನರೇಟರ್ಗೆ ಒದ್ದಿದೀಯಲ್ಲ. ಇದು ಸರೀನಾ ರಮ್ಯಾ? ಒದ್ದಿರೋ ರೇಂಜಿಗೆ ಬೀಜ ಬಾಯಿಂದ ಬಾಯಿಗೆ ಟ್ರಾನ್ಸ್ಫರ್ ಆಗೋದ್ ಬಾಕಿ. ನೀನ್ ಯಾವ್ ಹಿಟ್ಲರ್ಗಿಂತ ಕಮ್ಮಿ ಹೇಳು’ ಎಂದು ಬರೆದುಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ವಿಭಾಗದ ಪೊಲೀಸರು ನವೀನ್ ಸಾಗರ್ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67 (ಅಶ್ಲೀಲ ವಿಷಯ ಪ್ರಕಟಣೆ ಅಥವಾ ಪ್ರಸಾರ), ಐಪಿಸಿ ಸೆಕ್ಷನ್ 354- (ಮಹಿಳೆಯ ಗೌರವಕ್ಕೆ ಕುಂದು ತರುವಂತೆ ದೌರ್ಜನ್ಯ ಕೃತ್ಯ ನಡೆಸುವುದು) ಹಾಗೂ ಸೆಕ್ಷನ್ 354 ಈ (ಹಿಂಬಾಲಿಸುವಿಕೆ; ಮಹಿಳೆಯರನ್ನು ಅಂತರ್ಜಾಲ, ಇಮೇಲ್ ಮತ್ತಿತರೆ ಮಾಧ್ಯಮದ ಮೂಲಕ ಪದೇ ಪದೇ ಹಿಂಬಾಲಿಸುವಿಕೆ) ಅನ್ವಯ ಕೇಸು ದಾಖಲಿಸಿಕೊಂಡಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.







