ಹುತಾತ್ಮ ಪ್ರಧಾನಿಯ ನಿಂದನೆ ಹೇಡಿತನದ ವರ್ತನೆ: ಮೋದಿಯ ವಿರುದ್ಧ ಅಹ್ಮದ್ ಪಟೇಲ್ ಆಕ್ರೋಶ

ಹೊಸದಿಲ್ಲಿ, ಮೇ9: ಪ್ರಧಾನಿ ಮೋದಿ, ತನ್ನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪದೇ ಪದೇ ರಾಜೀವ್‌ಗಾಂಧಿ ಅವರನ್ನು ನಿಂದಿಸುತ್ತಿರುವ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಹುತಾತ್ಮ ಪ್ರಧಾನಿ’ಯನ್ನು ದೂಷಿಸುವುದು ಅತ್ಯಂತ ಹೇಡಿತನದ ವರ್ತನೆಯೆಂದು ಅವರು ಖಂಡಿಸಿದ್ದಾರೆ.
ರಾಜೀವ್ ಪ್ರಧಾನಿಯಾಗಿದ್ದಾಗ, ಗಾಂಧಿ ಕುಟುಂಬವು ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ‘ಖಾಸಗಿ ಟ್ಯಾಕ್ಸಿ’ಯಂತೆ ಬಳಸಿಕೊಳ್ಳುತ್ತಿತ್ತೆಂದು ಮೋದಿ ಚುನಾವಣಾ ಪ್ರಚಾರದಲ್ಲಿ ಆರೋಪಿಸಿದ ಮರುದಿನ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಬಿಜೆಪಿಯ ದ್ವೇಷದ ವರ್ತನೆಯಿಂದಾಗಿಯೇ, ರಾಜೀವ್ ಪ್ರಾಣಕಳೆದುಕೊಂಡರು. ಇಂತಹ ಆಧಾರ ರಹಿತ ಆರೋಪಗಳು ಹಾಗೂ ತನ್ನ ವಿರುದ್ಧ ಮಾಡಲಾದ ನಿಂದನೆಗಳಿಗೆ ಉತ್ತರಿಸಲು ರಾಜೀವ್‌ಜೀ ನಮ್ಮ ಜೊತೆಗಿಲ್ಲ. ಹುತಾತ್ಮ ಪ್ರಧಾನಿಯನ್ನು ದೂಷಿಸುವುದು ಅತ್ಯಂತ ಹೇಡಿತನದ ವರ್ತನೆ’’ಎಂದವರು ಹೇಳಿದ್ದಾರೆ.
‘‘ ಆದರೆ ಅವರ ಹತ್ಯೆಗೆ ಹೊಣೆಗಾರರು ಯಾರು?. ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರಕಾರವು ರಾಜೀವ್‌ಗೆ ಹೆಚ್ಚುವರಿ ಭದ್ರತೆ ನೀಡಲು ನಿರಾಕರಿಸಿತ್ತು . ರಾಜೀವ್ ಹತ್ಯೆ ಸಂಚಿನ ಬಗ್ಗೆ ವಿಶ್ವಸನೀಯ ಮಾಹಿತಿಗಳು ದೊರೆತಿದ್ದ ಹೊರತಾಗಿಯೂ ಅವರ ಭದ್ರತೆಯನ್ನು ಓರ್ವ ಪೊಲೀಸ್ ಸಿಬ್ಬಂದಿಗೆ ವಹಿಸಲಾಗಿತ್ತು ’’ ಎಂದು ಪಟೇಲ್ ಆಪಾದಿಸಿದರು.







