ರಮಝಾನ್ ವ್ರತಾಚರಣೆಯೊಂದಿಗೆ ಪಂದ್ಯದಲ್ಲಿ ಭಾಗಿ: ರಶೀದ್ ಖಾನ್, ನಬಿಯನ್ನು ಶಿಖರ್ ಧವನ್ ಶ್ಲಾಘಿಸಿದ್ದು ಹೀಗೆ..

ವಿಶಾಖಪಟ್ಟಣ, ಮೇ 9: ರಮಝಾನ್ ಉಪವಾಸದೊಂದಿಗೆ ಕ್ರಿಕೆಟ್ ಆಡುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾದ ರಶೀದ್ ಖಾನ್ ಮತ್ತು ಮುಹಮ್ಮದ್ ನಬಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ದಾಂಡಿಗ ಶಿಖರ್ ಧವನ್ ಶ್ಲಾಘಿಸಿದ್ದಾರೆ.
ಶಿಖರ್ ಧವನ್ ಹಿಂದೆ ಸನ್ ರೈಸರ್ಸ್ ತಂಡದಲ್ಲಿದ್ದರು. ತಮ್ಮ ಹಿಂದಿನ ತಂಡದಲ್ಲಿದ್ದ ಇಬ್ಬರು ಅಫ್ಘಾನಿಸ್ತಾನದ ಆಟಗಾರರ ಬಗ್ಗೆ ಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಪ್ರತಿಯೊಬ್ಬರಿಗೂ ರಮದಾನ್ ಕರೀಮ್ ಶುಭಾಶಯಗಳು. ಇವರ ಬಗ್ಗೆ ಹೆಮ್ಮೆಯಿದೆ. ಇಡೀ ದಿನ ಉಪವಾಸವಿದ್ದು ಆಟವಾಡುವುದು ಸುಲಭವೇನಲ್ಲ. ಆದರೆ ಇವರು ಅದನ್ನು ಸುಲಭವನ್ನಾಗಿಸಿದ್ದಾರೆ. ಅವರ ದೇಶಕ್ಕೆ ಮತ್ತು ವಿಶ್ವ ಕ್ರಿಕೆಟ್ ಗೆ ಸ್ಫೂರ್ತಿ. ಎಲ್ಲರೂ ದೊಡ್ಡ ಕನಸು ಕಾಣುವಂತೆ ನಿಮ್ಮ ಶಕ್ತಿ ಪ್ರೇರೇಪಿಸುತ್ತದೆ. ಅಲ್ಲಾಹನ ಅನುಗ್ರಹ ನಿಮ್ಮೊಂದಿಗಿರಲಿ” ಎಂದು ಧವನ್ ಟ್ವೀಟ್ ಮಾಡಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಶೀದ್ ಖಾನ್ ಮತ್ತು ಮುಹಮ್ಮದ್ ನಬೀ ಉಪವಾಸದೊಂದಿಗೆ ಆಡಿದ್ದರು. ಧವನ್ ಈ ಪಂದ್ಯದಲ್ಲಿ ಡೆಲ್ಲಿ ತಂಡದ ಖಾತೆಗೆ 16 ಎಸೆತಗಳಲ್ಲಿ 17 ರನ್‌ಗಳ ಕೊಡುಗೆ ನೀಡಿದ್ದರು. ರಶೀದ್ ಮತ್ತು ನಬೀ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಬಿ ಕಳೆದ ಪಂದ್ಯದಲ್ಲಿ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಇರುವ 20 ರನ್ ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.







