ಬಿಬಿಎಂಪಿ ವಿರುದ್ಧ ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ

ಬೆಂಗಳೂರು, ಮೇ 9: ಶಿವಾಜಿನಗರದಲ್ಲಿರುವ ರಸೆಲ್ ಮಾರುಕಟ್ಟೆಯ ವಾಹನ ನಿಲುಗಡೆ ಪ್ರದೇಶವನ್ನು ಮುಚ್ಚಿದ್ದ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಗುರುವಾರ ವ್ಯಾಪಾರಿಗಳು ರಸೆಲ್ ಮಾರುಕಟ್ಟೆ ಮುಚ್ಚಿ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ರೋಷನ್ ಬೇಗ್, ನಗರ ಸಂಚಾರ ವಿಭಾಗದ ಆಯುಕ್ತ ಹರಿಶೇಖರನ್‌ಗೆ ರಮಝಾನ್ ಮಾಸದಲ್ಲಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶ ಇಲ್ಲದೆ, ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ವ್ಯಾಪಾರಿಗಳು ಹಾಗೂ ಶಾಸಕರ ಮನವಿಗೆ ಸ್ಪಂದಿಸಿದ ಹರಿಶೇಖರನ್, ರಮಝಾನ್ ಮಾಸದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟರು.
ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್, ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








