ಲಂಕಾ: ಮೇ 14ರಂದು ಕೆಥೋಲಿಕ್ ಶಾಲೆಗಳು ಆರಂಭ

ಕೊಲಂಬೊ, ಮೇ 9: ಈಸ್ಟರ್ ರವಿವಾರದ ಭಯೋತ್ಪಾದಕ ದಾಳಿಯ ಬಳಿಕ, ತನ್ನ ಶಾಲೆಗಳನ್ನು ಮುಂದಿನ ವಾರ ಮೊದಲ ಬಾರಿಗೆ ತೆರೆಯುವುದಾಗಿ ಶ್ರೀಲಂಕಾ ಕೆಥೋಲಿಕ್ ಚರ್ಚ್ ಗುರುವಾರ ಪ್ರಕಟಿಸಿದೆ.
ಎಪ್ರಿಲ್ 21ರಂದು ದ್ವೀಪ ರಾಷ್ಟ್ರದ ಮೂರು ಚರ್ಚ್‌ಗಳು ಮತ್ತು ಮೂರು ವಿಲಾಸಿ ಹೊಟೇಲ್‌ಗಳಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್‌ಗಳಲ್ಲಿ 258 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮತ್ತೆ ಬಾಂಬ್ ದಾಳಿಗಳು ನಡೆಯಬಹುದು ಎಂಬ ಭೀತಿಯಿಂದಾಗಿ ಮುಚ್ಚಲಾಗಿದ್ದ ಶಾಲೆಗಳನ್ನು ಮಂಗಳವಾರ ತೆರೆಯಲಾಗುವುದು ಎಂದು ಕಾರ್ಡಿನಲ್ ಮಾಲ್ಕಮ್ ರಂಜಿತ್ ತಿಳಿಸಿದರು.
‘‘ನಾವು ಎಲ್ಲ ಕೆಥೋಲಿಕ್ ಶಾಲೆಗಳನ್ನು ಮೇ 14ರಂದು ತೆರೆಯಲು ನಿರ್ಧರಿಸಿದ್ದೇವೆ’’ ಎಂದು ಕೊಲಂಬೊದಲ್ಲಿ ದೇಶದ 12 ಬಿಶಪ್ಪರು ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನಡುವೆ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಡಿನಲ್ ಹೇಳಿದರು.
10,000ಕ್ಕೂ ಅಧಿಕವಿರುವ ಎಲ್ಲ ಸರಕಾರಿ ಶಾಲೆಗಳು ಸೋಮವಾರ ಆರಂಭಗೊಂಡಿವೆ. ಈ ಶಾಲೆಗಳಿಗೆ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ





