ಪ್ರಕೃತಿ ವಿಕೋಪದ ಸವಾಲು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿ: ರಜನೀಶ್ ಗೋಯಲ್ ಸೂಚನೆ
ಚಿಕ್ಕಮಗಳೂರು: ಮುಂಗಾರು ಪೂರ್ವ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆ

ಚಿಕ್ಕಮಗಳೂರು, ಮೇ 10: ಮುಂಬರುವ ಮುಂಗಾರು ಹಂಗಾಮಿನಲ್ಲಿ ತಲೆದೋರಬಹುದಾದ ಪ್ರಕೃತಿ ವಿಕೋಪದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯ ನಝೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂಗಾರು ಪೂರ್ವ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಅತೀವೃಷ್ಠಿಯಿಂದ ಉಂಟಾದ ಸಮಸ್ಯೆಗಳ ಆಧಾರದ ಮೇಲೆ ಈ ಬಾರಿ ಮುಂಗಾರಿನಲ್ಲಿ ಎದುರಾಗಬಹುದಾದ ಸಂಭವನೀಯ ಅಪಾಯವನ್ನು ಅಂದಾಜಿಸಿ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಕಂದಾಯ ಇಲಾಖೆ, ಜಿಪಂ, ಆಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್, ಕೃಷಿ, ತೋಟಗಾರಿಕೆ, ಗೃಹರಕ್ಷಕ ದಳ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸದಾ ಜಾಗೃತರಾಗಿ ಕೆಲಸ ಮಾಡಬೇಕು. ದೂರವಾಣಿ ಇಲಾಖೆ, ಸಾರಿಗೆ ಇಲಾಖಾಧಿಕಾರಿಗಳು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಸಂವಹನ ಸಂಪರ್ಕ ವ್ಯವಸ್ಥೆಗೆ ಕಾಳಜಿ ವಹಿಸಬೇಕೆಂದ ಅವರು, ಪ್ರವಾಹ ತಲೆದೋರಬಹುದಾದ ಪ್ರದೇಶಗಳಲ್ಲಿ ತಾತ್ಕಾಲಿಕ ಆಶ್ರಯ ತಾಣಗಳಿಗೆ ಜಾಗ ಗುರುತಿಸಿ, ಸಂತ್ರಸ್ಥರಿಗೆ ಊಟೋಪಚಾರ ಸೌಲಭ್ಯ ನೀಡಲು ಸದಾ ಸಮರ್ಥ ಸ್ಥಿತಿಯಲ್ಲಿ ಇರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮುಂಗಾರು ಹಂಗಾಮಿನಲ್ಲಿ ತಲೆದೋರಬಹುದಾದ ಪ್ರಕೃತಿ ವಿಕೋಪ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಾ, ವಿಪತ್ತು ನಿರ್ವಹಣೆಯ ಕುರಿತು ಸಂಬಂಧಪಟ್ಟ ತಾಲೂಕುಗಳಿಂದ ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ (24*7) ತೆರೆದು ಕರ್ತವ್ಯ ನಿರ್ವಹಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಮೂರು ಜನ ಸಿಬ್ಬಂದಿಯನ್ನು ನೇಮಿಸಿದ್ದು, ಇವರು ಪಾಳಿಯ ಮೇರೆಗೆ 8 ಗಂಟೆ ಅವಧಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಾದ ದೂರವಾಣಿ, ಕಂಪ್ಯೂಟರ್ , ಪ್ರಿಂಟರ್ ಇತ್ಯಾದಿ ಐ.ಟಿ ಸೌಲಭ್ಯಗಳನ್ನು ಒದಗಿಸಲಾಗಿದೆ ಈ ಕೇಂದ್ರದಲ್ಲಿ ಅಳವಡಿಸಲಾಗಿರುವ ದೂರವಾಣಿ ಸಂಖ್ಯೆ:08262-238950 ಹಾಗೂ ಟೋಲ್ ಫ್ರೀ ನಂಬರ್-1077ನ್ನು ಸಹ ಅಳವಡಿಸಿದ್ದು, ವಾಟ್ಸ್ ಆಫ್ ಗ್ರೂಪ್ (CKM- Calamity Group) ಪ್ರಾರಂಭಿಸಿದ್ದು, ಸಂಖ್ಯೆ: 9480778229 ಆಗಿರುತ್ತದೆ. ಈ ಕೇಂದ್ರದಲ್ಲಿ ಲಾಗ್‍ಬುಕ್ ನಿರ್ವಹಿಸಿದ್ದು, ಬರುವ ದೂರುಗಳನ್ನು ಈ ವಹಿಯಲ್ಲಿ ನಮೂದಿಸಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
KSNDMC ಮತ್ತು SEOC ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚಂಡಮಾರುತ, ಅತೀವೃಷ್ಠಿ ಇತ್ಯಾದಿಗಳ ಬಗ್ಗೆ ಮಾಹಿಯನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಇ-ಮೇಲ್, ದೂರವಾಣಿ, ವಾಟ್ಸ್ ಆಪ್ ಮತ್ತು ಎಸ್.ಎಂ.ಎಸ್ ಮೂಲಕ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಗೌತಮ್, ಸ್ವಯಂ ಸೇವಾ ಸಂಸ್ಥೆಗಳು, ಆಸ್ಪತ್ರೆಗಳು, ಆಂಬುಲೆನ್ಸ್ ಸರ್ವಿಸಸ್, ಬ್ಲಡ್ ಬ್ಯಾಂಕ್ ಇತ್ಯಾದಿಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕಾಲೋಚಿತಗೊಳಿಸಿ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ TEOC ಗಳನ್ನು ನಿರ್ಮಿಸಿದ್ದು, 24*7 ರಂತೆ ಕರ್ತವ್ಯ ನಿರ್ವಹಿಸುತ್ತಿವೆ. ಮೆಸ್ಕಾಂ ಟೋಲ್ ಫ್ರೀ ನಂಬರ್ 1912ನ್ನು ನಿರ್ಮಿಸಿದ್ದು, ಪ್ರತಿ ತಾಲೂಕಿನಲ್ಲಿಯೂ ಸಹ ಕರ್ತವ್ಯ ನಿರ್ವಹಿಸುತ್ತಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿಗೆ ಸಲಕರಣೆಗಳೊಂದಿಗೆ ಸದಾ ಸಿದ್ಧರಾಗಿರುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಹಾನಿಯಾಗಿರುವ ಒಟ್ಟು 47 ಕಲ್ವಟ್ರ್ಸ್‍ಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಜೂನ್ ತಿಂಗಳಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಹಾನಿಯಾದ ಕೆರೆಗಳ ದುರಸ್ತಿ ಕಾರ್ಯವನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಸಣ್ಣ ನೀರಾವರಿ ಇಲಖೆಯಿಂದ ಕೈಗೊಳ್ಳಲಾಗಿದೆ. ದುರಸ್ತಿ ಕಾರ್ಯವು ಪ್ರಗತಿಯಲ್ಲಿದ್ದು, ಜೂನ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಕಾಲ ಕಾಲಕ್ಕೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 (108) ಅಂಬುಲೆನ್ಸ್ ಸೇವೆಗಳನ್ನು ಸಜ್ಜುಗೊಳಿಸಲಾಗಿದೆ. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯವಾದ ಚುಚ್ಚುಮದ್ದುಗಳನ್ನು ನೀಡಲಾಗಿದೆ ಹಾಗೂ ಯಾವುದೇ ಸಂದರ್ಭದಲ್ಲಿ ತಕ್ಷಣ ಸೇವೆ ಒದಗಿಸಲು ಅಗತ್ಯವಾದ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಕೆ.ಎಸ್.ಎನ್.ಡಿ.ಎಂ.ಸಿ ನಿರ್ದೇಶಕ ಶ್ರೀನಿವಾಸರೆಡ್ಡಿ, ಮೈಸೂರು ವಿಭಾಗದ ವಿಭಾಗಾಧಿಕಾರಿ ಟಿ.ಕೆ.ಅನಿಲ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಳೆಯಿಂದಾಗಿ ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನ ಗುಡ್ಡಗಾಡು ಪ್ರದೇಶದ ರಸ್ತೆಗಳ ಮೇಲೆ ಮಣ್ಣು ಹಾಗೂ ಬಂಡೆಗಳು ಬೀಳುವ ಸಂಭವ ಇರುವ ಸಂದರ್ಭದಲ್ಲಿ ಇವುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಕ್ತ ವ್ಯವಸ್ಥೆಗೊಳಿಸಲಾಗುತ್ತಿದೆ. ಈ ವರ್ಷದಲ್ಲಿ ಅರಣ್ಯ ಇಲಾಖೆಯಿಂದ ರಸ್ತಗೆ ಬೀಳಬಹುದಾದಂತಹ 82 ಮರಗಳನ್ನು ತೆರವುಗೊಳಿಸಲಾಗಿದೆ. ಒಣಗಿದ 69 ಮರಗಳನ್ನು ಸಹ ಮುನ್ನೆಚ್ಛರಿಕೆ ಕ್ರಮವಾಗಿ ಅರಣ್ಯ ಇಲಾಖೆಯಿಂದ ಕತ್ತರಿಸಿ ತೆರವುಗೊಳಿಸಲಾಗಿದೆ. ವಿದ್ಯುತ್ ಲೈನ್ ಹಾದು ಹೋಗಿರುವ ಕಡೆಗಳಲ್ಲಿ ಅವುಗಳಿಗೆ ಅಡ್ಡಲಾಗಿ ಬಂದಿರುವ ಮರಗಳ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸಲಾಗಿದೆ. ವಿದ್ಯುತ್ ಸರಬರಾಜು ಸಮರ್ಪಕವಾಗಿ ಕಂಬದಿಂದ ಕಂಬಕ್ಕೆ ಹಾದು ಹೋಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚಿಸಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ದುರ್ಬಲ ಲೈನ್‍ಗಳನ್ನು ಸಬಲಗೊಳಿಸುವ ಕಾರ್ಯ ಸಹ ಪ್ರಗತಿಯಲ್ಲಿರುತ್ತದೆ. ಟ್ರಾನ್ಸ್ ಫಾರ್ಮರ್ ಗಳನ್ನು ತಪಾಸಣೆ ಮಾಡಿ ವಿದ್ಯುತ್ ಸರಬರಾಜು ಸಮಪರ್ಪಕವಾಗಿ ಒದಗಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಈ ಕಾರ್ಯಗಳಿಗೆ ಬೇಕಾಗುವ ಉಪಕರಣಗಳು ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸುವ ಬಗ್ಗೆ ಕ್ರಮ ವಹಿಸಲಾಗಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿಜಿಲ್ಲೆಯಲ್ಲಿ ತರಬೇತಿ ಹೊಂದಿದ 649 ಗೃಹರಕ್ಷಕ ಸಿಬ್ಬಂದಿ ಇದ್ದು, 22 ನುರಿತ ಈಜುಗಾರರು ಹಾಗೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ವಿಪತ್ತಿನ ಸಂದರ್ಭಕ್ಕನುಗುಣವಾಗಿ ತುರ್ತು ಕ್ರಮಕ್ಕಾಗಿ ತಂಡವನ್ನು ರಚಿಸಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂತ್ರಸ್ಥರನ್ನು ಸ್ಥಳಾಂತರಿಸಲು ಅಗತ್ಯವಾದ ಸಾರಿಗೆ ವ್ಯವಸ್ಥೆ ಒದಗಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಇಂತಹ ಘಟನೆಗಳು ಸಂಭವಿಸಿದ 24 ಗಂಟೆಯೊಳಗಾಗಿ ಸಂತ್ರಸ್ಥರಿಗೆ ಆರ್ಥಿಕ ಸಹಾಯ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಬಿದ್ದ ಮಳೆಯಿಂದ ಹಾನಿಯಾದ ಚರಂಡಿ ಕಾಲುವೆಗಳನ್ನು ಮಣ್ಣು ತೆಗೆದು ಸ್ವಚ್ಛಗೊಳಿಸಲು ಕೈಗೊಂಡಿರುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಾದ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜೂನ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ







