ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ತಮಿಳು ಸಾಹಿತಿ ಥೊಪ್ಪಿಲ್ ಮುಹಮ್ಮದ್ ಮೀರನ್ ನಿಧನ

ಚೆನ್ನೈ, ಮೇ 10: ಖ್ಯಾತ ಕಾದಂಬರಿಕಾರ ಮತ್ತು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಥೊಪ್ಪಿಲ್ ಮುಹಮ್ಮದ್ ಮೀರನ್ (74 ವರ್ಷ) ಚೆನ್ನೈ ಬಳಿಯ ವೀರಬಾಹು ನಗರದಲ್ಲಿರುವ ತನ್ನ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯ ಕರಾವಳಿ ತೀರದ ಥೇಂಗಾಯ್‌ಪಟ್ಟಿಣಂನಲ್ಲಿ 1944ರ ಸೆಪ್ಟೆಂಬರ್ 26ರಂದು ಜನಿಸಿದ್ದರು. 1988ರಿಂದ 2011ರ ನಡುವಿನ ಅವಧಿಯಲ್ಲಿ ‘ಒರು ಕಡಲೂರ ಗ್ರಾಮತ್ತಿನ್ ಕಥೈ,’ ‘ಥುರೈಮುಗಮ್’, ‘ಕೂನಮ್ ಥೊಪ್ಪು’, ‘ಸಾವು ನಾರ್ಕ್ಕಾಳಿ’, ‘ಅಂಜು ವನ್ನಮ್ ಥೇರು’’ ಮುಂತಾದ ಕಾದಂಬರಿಗಳನ್ನು ಬರೆದಿದ್ದು 1995ರಲ್ಲಿ ಬಿಡುಗಡೆಯಾದ ಸಾವು ನಾರ್ಕ್ಕಾಳಿ ಕೃತಿಗೆ 1997ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ‘ಅನ್ಬುಕು ಮುತ್ತುಮೈ ಇಲ್ಲೈ’, ‘ಥಂಗರಸು’, ‘ಅನಂತಸಾಯಮ್ ಕಾಲೊನಿ’, ‘ಒರು ಕುಟ್ಟಿ ಥೀವಿನ್ ವಾರಿಪ್ಪಾದಮ್’, ‘ಥೊಪ್ಪಿಲ್ ಮುಹಮ್ಮದ್ ಮೀರನ್ ಕಥೈಗಲ್’ ಹಾಗೂ ‘ಒರು ಮಾಮರಮಮ್ ಕೊಂಜಂ ಪರವೈಗಲಂ’ ಎಂಬ ಸಣ್ಣ ಕಥೆಗಳ ಸಂಗ್ರಹ ಹಾಗೂ ಅನುವಾದಿತ ಕೃತಿಗಳಿಂದಾಗಿ ಸಾಹಿತ್ಯ ಲೋಕದಲ್ಲಿ ಗಣ್ಯ ಸ್ಥಾನ ಪಡೆದಿದ್ದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಪ್ರಶಸ್ತಿ ಸಹಿತ 8 ಪ್ರಶಸ್ತಿ ಪಡೆದಿದ್ದರು. ತಮಿಳು ಮತ್ತು ಮಲಯಾಳಂ ಭಾಷೆ ಎರಡರಲ್ಲೂ ಪ್ರಭುತ್ವ ಹೊಂದಿದ್ದ ಮೀರನ್ ಅವರ ಬಹುತೇಕ ಕೃತಿಗಳಲ್ಲಿ ಮೀನುಗಾರರ ಬದುಕಿನ ಬವಣೆ ಮತ್ತು ಹೋರಾಟಗಳನ್ನು ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಲಾಗಿದೆ ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.





