ಉಡುಪಿ ಜಿಲ್ಲೆಯ 84 ಗ್ರಾಪಂಗಳಿಗೆ 141 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ: ಸಚಿವೆ ಜಯಾಮಾಲ

ಉಡುಪಿ, ಮೇ 10: ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳನ್ನು ಭಾಗಶಃ ಬರಪೀಡಿತ ತಾಲೂಕುಗಳೆಂದು ಈಗಾಗಲೇ ಘೋಷಣೆ ಮಾಡಲಾ ಗಿದ್ದು, ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ 84 ಗ್ರಾಪಂಗಳ 126 ಗ್ರಾಮಗಳಲ್ಲಿ 141 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಉಸು್ತವಾರಿ ಸಚಿವೆ ಡಾ.ಜಯಾಮಾಲ ತಿಳಿಸಿದ್ದಾರೆ.
ಮಣಿಪಾಲ ರಜತ್ರಾದಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತ ಸಭೆಯ ಬಳಿಕ ಉಡುಪಿಯ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾಧಿ ಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಸಿಂಧು ಬಿ.ರೂಪೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಜೊತೆ ಗಂಭೀರವಾಗಿ ಚರ್ಚಿಸಿ ಅಗತ್ಯ ಕ್ರಮ ತೆಗೆದು ಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿರುವ ಖಾಸಗಿ ಬಾವಿ ಮತ್ತು ಕೊಳವೆಬಾವಿಗಳಲ್ಲಿನ ನೀರುಗಳನ್ನು ಬಳಸಿಕೊಂಡು ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ತೆರೆದ ಬಾವಿ ಗಳ ಹೂಳೆತ್ತುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ದನಕರುಗಳ ಮೇವಿಗೆ ಯಾವುದೇ ಕೊರತೆಯಾಗಿಲ್ಲ ಎಂದವರು ಹೇಳಿದರು.
400 ಮದಗ ಹೂಳೆತ್ತುವಿಕೆ: ಜಿಲ್ಲೆಯಲ್ಲಿರುವ ಸುಮಾರು 400 ಮದಗಗಳ ಹೂಳೆತ್ತುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಹುಗ್ರಾಮ ಯೋಜನೆ, ಬೋರ್‌ವೆಲ್ ರೀಚಾರ್ಚ್, ಅಣೆಕಟ್ಟು ಹೂಳೆತ್ತುವ ಕುರಿತು ಯೋಚನೆ ಮಾಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಮೂಲಕ ಅಲ್ಲಲ್ಲಿ ನೀರನ್ನು ಹಿಡಿದಿಟ್ಟು ಇಂಗಿಸುವ ಕಾರ್ಯವನ್ನು ಹೆಚ್ಚು ಹೆಚ್ಚು ಮಾಡಬೇಕಾಗಿದೆ. ಹೂಳೆತ್ತುವ ಕೆಲಸವನ್ನು ನರೇಗಾ ಮೂಲಕ ಕೂಡ ಮಾಡಬಹುದಾಗಿದೆ. ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಲಿದ್ದಾರೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನದಿಗಳಿಗೆ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡಿರುವುದು ಕಂಡುಬಂದಿದೆ. ಅಧಿಕಾರಿಗಳು ಈ ಸಮಯದಲ್ಲಿ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಬಾರದ ಕಾರಣ ಈ ಸಮಸ್ಯೆ ಯಾಗಿದೆ ಎಂದು ಸಚಿವೆ ಜಯಮಾಲ ತಿಳಿಸಿದರು.
ನಗರಕ್ಕೆ 15-20 ದಿನಕ್ಕೆ ಬೇಕಾದ ನೀರು
ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯ ಬಜೆ ಅಣೆ ಕಟ್ಟಿನಲ್ಲಿ ನೀರು ಖಾಲಿಯಾಗಿದೆ. ಅಲ್ಲಿನ ಮರಳುಗಳನ್ನು ಹೂಳೆತ್ತುವ ಕೆಲಸ ಮಾಡಿ, ಅಲ್ಲಿನ ಬಂಡೆಗಳನ್ನು ಸಿಡಿಸಿ ಡ್ರೆಡ್ಜಿಂಗ್ ಮೂಲಕ ನೀರನ್ನು ಜಾಕ್ ವೆಲ್‌ಗೆ ಹಾಯಿಸಿ ಸರಬರಾಜು ಮಾಡಲಾಗುವುದು. ಸದ್ಯ ಬಜೆಯಲ್ಲಿ 15- 20 ದಿನಗಳಿಗೆ ಬೇಕಾದ ನೀರಿನ ಸಂಗ್ರಹವಿೆ ಎಂದು ಸಚಿವೆ ಜಯಾಮಾಲ ತಿಳಿಸಿದರು.
ಹಣಕಾಸಿನ ಕೊರತೆ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹಣಕಾಸಿನ ಯಾವುದೇ ತೊಂದರೆ ಇಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳ ಅಕೌಂಟ್‌ನಲ್ಲಿ 33 ಕೋಟಿ ರೂ. ಇದ್ದು, ಅಗತ್ಯ ಬಿದ್ದರೆ ಆ ಹಣವನ್ನು ಖರ್ಚು ಮಾಡಬಹುದಾಗಿದೆ ಎಂದು ಸಚಿವೆ ಜಯಾಮಾಲ ತಿಳಿಸಿದರು.
ಅದೇ ರೀತಿ ಇನ್ನೊಂದು ಅಕೌಂಟ್‌ನಲ್ಲಿ ಆರು ಕೋಟಿ ರೂ. ಹಣ ಇದ್ದು, ಅದರಲ್ಲಿ 3 ಕೋಟಿ ರೂ. ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮತ್ತು 3 ಕೋಟಿ ರೂ. ಹಣವನ್ನು ಹೂಳೆತ್ತುವ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಆದುದರಿಂದ ಹಣಕಾಸಿನ ಯಾವುದೇ ಸಮಸ್ಯೆ ನಮ್ಮಲ್ಲಿ ಇಲ್ಲ ಎಂದರು.








