ಸರಕಾರಿ, ಅನುದಾನಿತ ಪದವಿ ಕಾಲೇಜುಗಳ ಪ್ರವೇಶ ಶುಲ್ಕ ನಿಗದಿ: ಕಾಲೇಜುಗಳ ಶುಲ್ಕ ಕೇವಲ ರೂ. 2,500

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 10: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸ್ಗಳಿಗೆ 2019-20ನೆ ಶೈಕ್ಷಣಿಕ ಸಾಲಿಗೆ ಶುಲ್ಕಗಳನ್ನು ನಿಗದಿ ಪಡಿಸಲಾಗಿದ್ದು, ಕೇವಲ 2500ರೂ.ಗಿಂತಲೂ ಕಡಿಮೆ ಹಣದಲ್ಲಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು ಕಾಲೇಜುಗಳ ನೋಂದಣಿಗಾಗಿ ಪಡೆಯುವ ಅರ್ಜಿಗಳು ಉಚಿತವಾಗಿರುತ್ತದೆ. ಕಾಲೇಜಿನ ಪ್ರವೇಶ ಶುಲ್ಕ ಕೇವಲ 80ರೂ.ಇದ್ದು, ಬೋಧನ ಶುಲ್ಕ 940ರೂ., ಕಾಲೇಜು ಅಭಿವೃದ್ಧಿ ಶುಲ್ಕ 200ರೂ. ಪ್ರಯೋಗಾಲಯಕ್ಕೆ 260ರೂ.ಉಳಿದಂತೆ ವೈದ್ಯಕೀಯ ತಪಾಸಣೆ, ವಾಚಾನಾಲಯ ಶುಲ್ಕ ಸೇರಿದಂತೆ ಎಲ್ಲಾ ವಿಧದ ಶುಲ್ಕಗಳು 100ರೂ.ಗಿಂತ ಕಡಿಮೆ ಇರುತ್ತದೆ.
ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಆಯಾಯ ಕಾಲೇಜುಗಳ ಅರೆ ಸರಕಾರಿ ಬ್ಯಾಂಕ್ ಖಾತೆಗಳನ್ನು ಪ್ರಾಂಶುಪಾಲರು ಹಾಗೂ ಸೇವೆಯಲ್ಲಿ ಹಿರಿಯರಾದ ಮತ್ತೊಬ್ಬ ಉಪನ್ಯಾಸಕರ ಹೆಸರಿನಲ್ಲಿ ಜಂಟಿ ಖಾತೆಗಳನ್ನಾಗಿ ಪರಿವರ್ತಿಸಿಕೊಂಡು ಅಲ್ಲಿ ಜಮೆ ಮಾಡಲು ಸೂಚಿಸಲಾಗಿದೆ. ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಮಂಜೂರು ಮಾಡಲಾಗುವ ಸ್ಕಾಲರ್ಶಿಪ್ ಮೊತ್ತದಲ್ಲಿ ಕಾಲೇಜಿನ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸಿಕೊಂಡು ಉಳಿಕೆ ಮೊತ್ತವನ್ನು ವಿದ್ಯಾರ್ಥಿಗಳಿಗೆ ಹಿಂಪಾವತಿಸಲು ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಚಿತ್ರಕಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕಗಳನ್ನು 1000ರೂ.ಗೆ ಹಾಗೂ ಪ್ರವೇಶಾತಿ ಶುಲ್ಕಗಳನ್ನು ಈಗಿರುವ ಶುಲ್ಕ ರೂ.200ರೂ.ಬದಲಾಗಿ 500ರೂ.ಗಳಿಗೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಹಾಗೂ ಸದರಿ ಶುಲ್ಕಗಳನ್ನು ಆಯಾಯ ಕಾಲೇಜುಗಳು ನೇರವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿಗೆ ಸಂದಾಯ ಮಾಡಬೇಕಾಗಿದೆ.
ಪ್ರವೇಶ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು 2019-20ನೆ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪದವಿ ಕೋರ್ಸ್ಗಳಿಗೆ ಸೇರುವ ವಿದ್ಯಾರ್ಥಿಗಳಿಂದ ಮಾತ್ರ ವಸೂಲಿ ಮಾಡತಕ್ಕದ್ದು, ಹಾಗೂ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಚುಟುವಟಿಕೆಗಳು, ಗ್ರಂಥಾಲಯದ ಗುರುತಿನ ಚೀಟಿ ಸಂಬಂಧಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇನಿನ ಸಮಿತಿಯು ನಿರ್ಣಯಿಸತಕ್ಕದ್ದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
2018-19ನೆ ಸಾಲಿನಲ್ಲಿ ವಿದ್ಯಾರ್ಥಿನಿಯರಿಗೆ ಸರಕಾರಿ, ಅರೆ ಸರಕಾರಿ ಮತ್ತು ವಿಶ್ವವಿದ್ಯಾಲಯಗಳ ಶುಲ್ಕಗಳಲ್ಲಿ ನೀಡಲಾಗಿರುವ ವಿನಾಯಿತಿಯನ್ನು ಮುಂದುವರೆಸಲು ಹಾಗೂ 2019-20ನೆ ಸಾಲಿನಲ್ಲಿ ಅರೆ ಸರಕಾರಿ ಹಾಗೂ ವಿಶ್ವವಿದ್ಯಾಲಯಗಳ ಶುಲ್ಕವನ್ನು ವಿದ್ಯಾರ್ಥಿನಿಯರಿಂದ ವಸೂಲಿ ಮಾಡಿ, ಪ್ರವೇಶಾತಿ ಹಾಗೂ ಪರೀಕ್ಷಾ ಶುಲ್ಕ ವಸೂಲಾತಿ ಪ್ರಕ್ರಿಯೆ ಮುಗಿದ ನಂತರ ಮರುಪಾವತಿಸಲು ಸೂಚಿಸಲಾಗಿದೆ.
ಶುಲ್ಕಗಳ ವಿವರ: ಅರ್ಜಿ ಶುಲ್ಕ-ಉಚಿತ, ಪ್ರವೇಶ ಶುಲ್ಕ-80ರೂ., ಬೋಧನಾ ಶುಲ್ಕ-940ರೂ., ಪ್ರಯೋಗಾಲಯ ಶುಲ್ಕ-260ರೂ., ವೈದ್ಯಕೀಯ ತಪಾಸಣಾ ಶುಲ್ಕ-30ರೂ., ವರ್ಗಾವಣೆ ಪತ್ರ ಶುಲ್ಕ 40ರೂ., ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ-20ರೂ., ವಾಚನಾಲಯ ಶುಲ್ಕ-70ರೂ., ಕ್ರೀಡಾ ಶುಲ್ಕ-100ರೂ., ಗ್ರಂಥಾಲಯ ಶುಲ್ಕ-100ರೂ., ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ-25ರೂ., ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ 25ರೂ., ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ಗೆ -50ರೂ., ಭಾರತೀಯ ರೆಡ್ಕ್ರಾಸ್ ಸಂಸ್ಥೆ ಶುಲ್ಕ-50ರೂ., ಎನ್ನೆಸ್ಸೆಸ್ ಶುಲ್ಕ-50ರೂ. ಹಾಗೂ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ, ಕ್ರೀಡಾ ಅಭಿವೃದ್ಧಿ ಶುಲ್ಕವು ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿದಂತೆ ಇರುತ್ತದೆ.







