ಯಡಿಯೂರಪ್ಪಗೆ ಅಧಿಕಾರ ದಾಹ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಲಬುರಗಿ, ಮೇ 10: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಅಧಿಕಾರ ಲಾಲಸೆ-ದಾಹ ಹೆಚ್ಚಾಗಿದೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಏನೇ ತಿಪ್ಪರಲಾಗ ಹಾಕಿದರೂ ಚಿಂಚೋಳಿ, ಕುಂದಗೋಳ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ನುಡಿದರು.
‘ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ನಮ್ಮ ಸಂಖ್ಯಾಬಲ 109ಕ್ಕೆ ಏರಿಕೆಯಾಗಲಿದೆ’ ಎಂಬ ಬಿಎಸ್‌ವೈ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ಸದಾ ಅಧಿಕಾರದ ದಾಹ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
113 ಸ್ಥಾನಗಳು ಬಂದರೆ ಮಾತ್ರ ಯಡಿಯೂರಪ್ಪ ಸಿಎಂ ಆಗುವುದು. ನಮ್ಮಲ್ಲಿ ಯಾವುದೇ ಅತೃಪ್ತರು ಇಲ್ಲ. ಇರುವ ಅತೃಪ್ತರೆಲ್ಲರೂ ಬಿಜೆಪಿಯಲ್ಲಿದ್ದಾರೆ. ನಾವು ಅವರನ್ನು ಖರೀದಿ ಮಾಡಲು ಹೋಗುವುದಿಲ್ಲ. ಆದರೆ, ಬಿಜೆಪಿಯವರು ಬೇರೆ ಪಕ್ಷದ ಶಾಸಕರ ಖರೀದಿಗೆ ಕೋಟಿ ಕೋಟಿ ರೂ.ಹಣ ಎಲ್ಲಿಂದ ತರುತ್ತಾರೆಂದು ಖಾರವಾಗಿ ಪ್ರಶ್ನಿಸಿದರು.







