ಧಾರವಾಡ ಕಟ್ಟಡ ಕುಸಿತ ಪ್ರಕರಣ: ಮೃತರ ವಾರಸುದಾರರು-ಗಾಯಾಳುಗಳ ಹೇಳಿಕೆ ದಾಖಲು

ಧಾರವಾಡ, ಮೇ 10: ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವು ಕಳೆದ ಮಾ.19ರಂದು ಕುಸಿತಗೊಂಡಿತ್ತು. ಈ ಪ್ರಕರಣದ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ವಿಚಾರಣೆ ನಡೆಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾರಂಭವಾದ ವಿಚಾರಣೆಯಲ್ಲಿ ಕಟ್ಟಡ ದುರಂತದಲ್ಲಿ ಮೃತಪಟ್ಟವರ ವಾರಸುದಾರರು, ಗಾಯಾಳುಗಳು ಹಾಗೂ ಸಂಬಂಧಿಸಿದವರು ಹಾಜರಾಗಿ ದಂಡಾಧಿಕಾರಿ ವಿಚಾರಣಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ, ಮಾಹಿತಿ ಮತ್ತು ದಾಖಲೆಗಳನ್ನು ಖುದ್ದಾಗಿ ಸಲ್ಲಿಸಿದರು. ಮಾ.19ರ ಮಧ್ಯಾಹ್ನ 3.40ಕ್ಕೆ ಸಂಭವಿಸಿದ ಈ ಘಟನೆಯಲ್ಲಿ 70 ರಿಂದ 80 ಜನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. 19 ಜನ ಮೃತಪಟ್ಟಿದ್ದರು. 15 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 57 ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರತರಲಾಗಿತ್ತು.
ಈ ನಿರ್ಮಾಣ ಹಂತದ ಕಟ್ಟಡವು ಬೀಳಲು ಕಾರಣವಾದ ಸಂದರ್ಭಗಳು, ಅದಕ್ಕೆ ಕಾರಣವಾದ ಅಂಶಗಳು ಮತ್ತಿತರ ವಿಷಯಗಳ ಸಂಪೂರ್ಣ ಸತ್ಯಾಂಶ ಕಂಡು ಹಿಡಿಯಲು, ತನಿಖೆ ನಡೆಸಲು ಸೂಚಿಸಿ ಸರಕಾರವು ಮಾ.26ರಂದು ಆದೇಶ ಹೊರಡಿಸಿತ್ತು.
ಘಟನೆಯಲ್ಲಿ ಮೃತಪಟ್ಟ 19 ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ರೂ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ 2 ಲಕ್ಷ ರೂ.ಹಾಗೂ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ 2 ಲಕ್ಷ ರೂ.ಸೇರಿ ಮೃತ 19 ಜನರ ವಾರಸುದಾರರಿಗೆ ಪ್ರತಿಯೊಬ್ಬರಿಗೂ ತಲಾ 7 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ 15 ಜನರಿಗೆ ಮಹಾನಗರ ಪಾಲಿಕೆಯಿಂದ 1 ಲಕ್ಷ ರೂ., ಪ್ರಧಾನಮಂತ್ರಿಗಳ ಕಚೇರಿಯಿಂದ 1 ಲಕ್ಷ ರೂ. ಸೇರಿ 15 ಜನರಿಗೆ ತಲಾ 2 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗಾಯಾಳುಗಳ ಬಳಿಗೆ ಬಂದು ಹೇಳಿಕೆ ದಾಖಲು: ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪ್ರೇಮಾ ಉಣಕಲ್ ಹಾಗೂ ಯಲ್ಲಪ್ಪಜೋಗಿನ್ ಅವರು ಜಿಲ್ಲಾಧಿಕಾರಿಗಳ ಸಭಾಭವನಕ್ಕೆ ಮೇಲೇರಿ ಬರಲು ಅಶಕ್ತರಾಗಿರುವುದನ್ನು ಮನಗಂಡ ಜಿಲ್ಲಾಧಿಕಾರಿ, ಗಾಯಾಳುಗಳು ಕುಳಿತಿದ್ದ ನೆಲಮಹಡಿಗೆ ಇಳಿದು ಬಂದು ಹೇಳಿಕೆಗಳನ್ನು ದಾಖಲಿಸಿಕೊಂಡರು. ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಹಾಗೂ ಸಿಬ್ಬಂದಿ ವರ್ಗ ಈ ವೇಳೆ ಉಪಸ್ಥಿತರಿದ್ದರು.







