ಪೇಜಾವರ ಮಠದ ವತಿಯಿಂದ ಪ್ರಶಸ್ತಿ ಘೋಷಣೆ: ದಿ.ವಿಜಯನಾಥ ಶೆಣೈಗೆ ಮರಣೋತ್ತರ ‘ವಿಜಯಶ್ರೀ’ ಪ್ರಶಸ್ತಿ

ಉಡುಪಿ, ಮೇ 10: ಶ್ರೀ ವಿಶ್ವೇಶತೀರ್ಥ ಶ್ರೀ ಕಳೆದ ಹಲವು ವರ್ಷಗಳಿಂದ ಪೇಜಾವರ ಮಠದ ವತಿಯಿಂದ ಮಠದ ಆರಾಧ್ಯಮೂರ್ತಿ ಯಾದ ಶ್ರೀರಾಮ ವಿಠಲ ದೇವರ ಹೆಸರಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ನೀಡುವ ‘ವಿಜಯಶ್ರೀ ಹಾಗೂ ಶ್ರೀರಾಮ ವಿಠಲ’ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ಎಂ.ರಘುರಾಮಾಚಾರ್ಯರು ಈ ಸಾಲಿನ ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಿದರು. ಪೇಜಾವರ ಮಠದ ಪರಂಪರೆಯಲ್ಲಿ ಬರುವ ಶ್ರೀವಿಜಯಧ್ವಜತೀರ್ಥರ ಸಂಸ್ಮರಣೆಯಲ್ಲಿ ನೀಡುವ ವಿಜಯಶ್ರೀ ಪ್ರಶಸ್ತಿಯನ್ನು ಮಣಿಪಾಲದ ಕಲಾಗ್ರಾಮದ ರೂವಾರಿ ಹಾಗೂ ಸಾಂಸ್ಕೃತಿಕ ಸಂಘಟಕರಾಗಿದ್ದ ದಿ. ವಿಜಯನಾಥ ಶೆಣೈ ಅವರಿಗೆ ಮರಣೋತ್ತರ ವಾಗಿ ನೀಡಲಾಗುವುದು. ಪ್ರಶಸ್ತಿಯು 25,000ರೂ.ನಗದನ್ನು ಒಳಗೊಂಡಿದೆ ಎಂದವರು ತಿಳಿಸಿದರು.
ಈ ಬಾರಿಯ ಶ್ರೀರಾಮ ವಿಠಲ ಪ್ರಶಸ್ತಿಗೆ ಒಟ್ಟು 12 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಶಶಿಕಾಂತ್ ಶೆಟ್ಟಿ ಕಾರ್ಕಳ, ಚಂದ್ರಶೇಖರ ಧರ್ಮಸ್ಥಳ, ಬೇಗಾರು ಶಿವಕುಮಾರ್, ದಿವಾಕರ ರೈ ಸಂಪಾಂಜೆ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕೆ.ರಾಘವೇಂದ್ರ ರಾವ್, ಸಾಹಿತ್ಯದಲ್ಲಿ ಎಚ್.ಶಾಂತರಾಜ ಐತಾಳ್, ಚಿತ್ರಕಲೆಯಲ್ಲಿ ಸುಬ್ರಹ್ಮಣ್ಯ ರಾವ್, ವಾದ್ಯ ಸಂಗೀತದಲ್ಲಿ ಉಡುಪಿ ಜನಾರ್ದನ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಯಂತ್ ಭಟ್, ನೃತ್ಯ ಕ್ಷೇತ್ರದಲ್ಲಿ ಲಕ್ಷ್ಮೀ ಗುರುರಾಜ್, ಛಾಯಾಗ್ರಹಣ ಕ್ಷೇತ್ರದಲ್ಲಿ ಆಸ್ಟ್ರೋ ಮೋಹನ್ ಹಾಗೂ ಪಾಕಶಾಸ್ತ್ರದಲ್ಲಿ ಪಿ.ಲಕ್ಷ್ಮೀನಾರಾಯಣ ಭಟ್‌ರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ತಲಾ 10,000ರೂ. ನಗದು ಮತ್ತು ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ರಘುರಾಮಾಚಾರ್ಯರು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ ಮೇ 14ರಂದು ಸಂಜೆ 5ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಸಂಜೆ 5 ರಿಂದ 6:45ರವರೆಗೆ ವಿದ್ವಾಂಸರಾದ ಆನಂದತೀರ್ಥ ನಾಗಸಂಪಿಗೆ ಹಾಗೂ ಪ್ರಭಂಜನಾಚಾರ್ಯ ರಿಂದ ಪ್ರವಚನ ನಡೆಯಲಿದೆ. 6:45ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರ್ಯಾಯ ಪಲಿಮಾರುಮಠದ ಶ್ರೀವಿದ್ಯಾಧೀಶ ತೀರ್ಥರು, ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಮತ್ತು ಶ್ರೀವಿಶ್ವ ಪ್ರಸನ್ನ ತೀರ್ಥರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಜಾಂಬವತಿ ಕಲ್ಯಾಣ ಎಂಬ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವಿದೆ ಎಂದೂ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಷ್ಣುಮೂರ್ತಿ ಆಚಾರ್ಯ, ಎಸ್.ವಿ.ಭಟ್ ಹಾಗೂ ಪಿ.ವಾಸುದೇವ ಭಟ್ ಉಪಸ್ಥಿತರಿದ್ದರು.







