“ಚುನಾವಣಾ ಪ್ರಚಾರದಲ್ಲಿ ತನ್ನ ತದ್ರೂಪಿಯನ್ನು ಬಳಸುತ್ತಿರುವ ಗಂಭೀರ್”
ಫೋಟೊ ಟ್ವೀಟ್ ಮಾಡಿ ಆಪ್ ಆರೊಪ

ಹೊಸದಿಲ್ಲಿ, ಮೇ 10: ಬಿಸಿಲ ಬೇಗೆ ತಾಳಲಾರದೆ ಕ್ರಿಕೆಟಿಗ ಹಾಗೂ ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ಅವರ ತದ್ರೂಪಿ ಪಾಲ್ಗೊಳ್ಳುತ್ತಿದ್ದಾರೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಆಪ್ ಅಭ್ಯರ್ಥಿ ಆತಿಶ್ ವಿರುದ್ಧ ಅಶ್ಲೀಲ ಕರಪತ್ರ ವಿತರಿಸಿದ ವಿವಾದದ ಕುರಿತು ಬಿಜೆಪಿ ಹಾಗೂ ಆಪ್ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಸಿಸೋಡಿಯಾ ಈ ಟ್ವೀಟ್ ಮಾಡಿದ್ದಾರೆ ಹಾಗೂ ಗೌತಮ್ ಗಂಭೀರ್ ಅವರ ತದ್ರೂಪಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಚಲನಚಿತ್ರಗಳಲ್ಲಿ ದ್ವಿಪಾತ್ರ, ಕ್ರಿಕೆಟ್‌ನಲ್ಲಿ ರನ್ನರ್ ಅನ್ನು ನೀವು ನೋಡಿರಬಹುದು. ಆದರೆ, ಚುನಾವಣಾ ಪ್ರಚಾರದಲ್ಲಿ ತದ್ರೂಪಿಯನ್ನು ಬಳಸುತ್ತಿರುವುದನ್ನು ನೀವು ನೋಡುತ್ತಿರುವುದು ಇದೇ ಮೊದಲು ಎಂದು ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಮಹಾ ಮೈತ್ರಿ. ಗೌತಮ್ ಗಂಭೀರ್ ಅವರು ಹವಾನಿಯಿಂತ್ರಿತ ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಅವರಿಗೆ ಬಿಸಿಲಿನ ತಾಪ ಎದುರಿಸಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನದಲ್ಲಿ ಟೊಪ್ಪಿ ಧರಿಸಿದ ತದ್ರೂಪಿ ವ್ಯಕ್ತಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕರ್ತರು ತದ್ರೂಪಿ ಗಂಭೀರ್‌ಗೆ ಹೂ ಹಾರ ಹಾಕುತ್ತಿದ್ದಾರೆ. ಅಲ್ಲದೆ, ವಾಸ್ತವದಲ್ಲಿ ಈ ತದ್ರೂಪಿ ವ್ಯಕ್ತಿ ಕಾಂಗ್ರೆಸ್ ನಾಯಕ ಎಂದು ಸಿಸೋಡಿಯಾ ಹೇಳಿದ್ದಾರೆ.







