ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿ ಕಾಯ್ದೆ: ಸುಪ್ರೀಂ ತೀರ್ಪಿಗೆ ಸಿಎಂ ಸೇರಿ ಹಲವರ ಸ್ವಾಗತ

ಬೆಂಗಳೂರು, ಮೇ 10: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗ(ಎಸ್ಸಿ-ಎಸ್ಟಿ)ದ ನೌಕರರ ಮುಂಭಡ್ತಿ ಮೀಸಲಾತಿ ಕಲ್ಪಿಸುವ ಸಂಬಂಧ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಸ್ವಾಗತಿಸಿದ್ದಾರೆ.
ನಮ್ಮ ನಿರ್ಣಯ ಎತ್ತಿಹಿಡಿದಿದೆ: ಹಿಂದುಳಿದವರಿಗೆ ಅನ್ಯಾಯ ಆಗಬಾರದೆಂದು ಪರಿಶಿಷ್ಟ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ಕಾಯ್ದೆ ತರಲಾಗಿತ್ತು. ಅದನ್ನು ಪ್ರಶ್ನಿಸಿ ಪವಿತ್ರಾ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕೋರ್ಟ್ ನಾವು ತೆಗೆದುಕೊಂಡ ನಿರ್ಣಯವನ್ನು ಎತ್ತಿಹಿಡಿದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವರಿಗೂ ನ್ಯಾಯ ಒದಗಿಸಲು ಕಾಂಗ್ರೆಸ್ ಸರಕಾರ ಕಟಿಬದ್ಧವಾಗಿದೆ. ಇನ್ನು ಬಿಜೆಪಿಗೆ ಶೋಷಿತರು ಕನಸು-ಮನಸಿನಲ್ಲೂ ಮತ ಹಾಕಬಾರದು. ಅವರು ದಲಿತ, ಹಿಂದುಳಿದ ಮತ್ತು ಸಂವಿಧಾನ ವಿರೋಧಿಗಳು ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.
ಕಾಯ್ದೆ ಅನುಷ್ಠಾನಕ್ಕೆ ಕ್ರಮ: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂಬಂಧದ ನೂತನ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಈ ಆದೇಶದಿಂದ ಪರಿಶಿಷ್ಟ ನೌಕರರಿಗೆ ನ್ಯಾಯ ಸಿಕ್ಕಿದೆ. ಉಳಿದ ಜನಾಂಗದವರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಹೊಸ ಹುದ್ದೆ ಸೃಷ್ಟಿ, ಇತರರಿಗೆ ಯಾವ ರೀತಿಯಲ್ಲೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರಮುಖ ಹೆಜ್ಜೆ: ಪರಿಶಿಷ್ಟ ನೌಕರರ ಹಿತ ಕಾಪಾಡಲು ರಾಜ್ಯ ಸರಕಾರ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಇದು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನಾವಿಟ್ಟ ಪ್ರಮುಖ ಹೆಜ್ಜೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀರ್ಪನ್ನು ಟ್ವಿಟ್ಟರ್ ಮೂಲಕ ಸ್ವಾಗತಿಸಿದ್ದಾರೆ.
‘ಪರಿಶಿಷ್ಟ ನೌಕರರ ಮುಂಭಡ್ತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮೀಸಲು ಕಾಯ್ದೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪುನ್ನು ಸ್ವಾಗತಿಸುವೆ. ನಮ್ಮ ಸರಕಾರ ಸಂವಿಧಾನಿಕ ಚೌಕಟ್ಟಿನಲ್ಲಿ ಸರಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿ ಎಲ್ಲರಿಗೂ ಅವಕಾಶ ಒದಗಿಸುವ ರಾಜ್ಯ ಸರಕಾರದ ಸದುದ್ದೇಶವನ್ನು ಈ ತೀರ್ಪು ಬೆಂಬಲಿಸಿದೆ’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ
ಅನ್ಯಾಯವಾಗಿದೆ, ಪುನರ್‌ಪರಿಶೀಲನಾ ಅರ್ಜಿಗೆ ಸಿದ್ಧತೆ
ಪರಿಶಿಷ್ಟರ ಭಡ್ತಿಯಲ್ಲಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು. ತೀರ್ಪು ತಪ್ಪಿನಿಂದ ಕೂಡಿದೆ ಮತ್ತು ‘ಅಹಿಂಸಾ’ ವರ್ಗಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಸ್ಪಷ್ಟನೆಯನ್ನು ಕೋರಲು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸುವುದು ಒಕ್ಕೂಟ ತೀರ್ಮಾನಿಸಿದೆ’
-ಎಂ.ನಾಗರಾಜ್ ಅಹಿಂಸಾ ಅಧ್ಯಕ್ಷ
‘ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಎಸ್ಸಿ-ಎಸ್ಟಿ ವರ್ಗದ ನೌಕರರ ದಕ್ಷತೆ, ಹಿಂದುಳಿದಿರುವಿಕೆಯನ್ನು ಪ್ರಶ್ನಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಅದಕ್ಕೆ ಉತ್ತರ ನೀಡಿದ್ದು, ಹಿಂಭಡ್ತಿಗೆ ಗುರಿಯಾಗಿದ್ದ ನೌಕರರಿಗೆ ಕೂಡಲೇ ಈ ಹಿಂದಿನ ಹುದ್ದೆಗಳನ್ನೇ ನೀಡಬೇಕು. ಸಮಾಜದ ಎಲ್ಲ ವರ್ಗಗಳ ಹಿತರಕ್ಷಣೆಯನ್ನು ಸರಕಾರ ಕಾಪಾಡಬೇಕು’
-ಡಾ.ವಿಜಯಕುಮಾರ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ







