ಬೆಂಗಳೂರು: ಶಂಕಿತ ವ್ಯಕ್ತಿಗಾಗಿ ಕರಪತ್ರ ಹೊರಡಿಸಿದ ಪೊಲೀಸರು
ಬೆಂಗಳೂರು, ಮೇ 10: ನಗರದ ಮೆಟ್ರೋ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಶಂಕಿತ ವ್ಯಕ್ತಿಯ ಪತ್ತೆಗೆ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು, ಕರಪತ್ರ ಹೊರಡಿಸಿದ್ದಾರೆ.
ಪತ್ರದಲ್ಲಿ ಏನಿದೆ?: ಮೇ 6ರ ಸಂಜೆ 7:30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ, ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರವೇಶಿಸುವಾಗ ಶಬ್ದ ಬಂದಿದೆ. ಈ ವೇಳೆ, ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಆತನ ಸೊಂಟದಲ್ಲಿ ಬೆಲ್ಟ್ ಇತ್ತು ಎನ್ನಲಾಗಿದೆ.
ಗಡ್ಡ ಬಿಟ್ಟು, ಜುಬ್ಬಾ ಧರಿಸಿ ಟೋಪಿ ಹಾಕಿದ್ದ ಆ ವ್ಯಕ್ತಿಯ ಜುಬ್ಬಾ ಒಳಗಡೆ ಒಂದು ಬೆಲ್ಟ್ ಹಾಕಿದ್ದು, ಭದ್ರತಾ ಸಿಬ್ಬಂದಿ ಅದನ್ನು ತೆಗೆಯಿರಿ ಎಂದಿದ್ದಕ್ಕೆ ಹಣ ಇದೆ ಎಂದು ಹೇಳಿ ವಾಪಸ್ ತೆರಳಿದ್ದಾನೆ. ನಂತರ ಹತ್ತು ನಿಮಿಷಗಳ ನಂತರ ಮೆಟ್ರೋ ನಿಲ್ದಾಣಕ್ಕೆ ಮತ್ತೆ ಬಂದಿದ್ದು, ಒಳಗೆ ಪ್ರವೇಶ ಮಾಡದೆ, ವಾಪಸ್ಸು ಹೋಗಿರುತ್ತಾನೆ. ಈ ಬಗ್ಗೆ ಮಾಹಿತಿ ಇದ್ದಲ್ಲಿ, ಪೊಲೀಸರಿಗೆ ತಿಳಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಶಂಕಿತ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಉಪ್ಪಾರ ಪೇಟೆ ಪೊಲೀಸ್ ಠಾಣೆ 080-22942503ಗೆ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





