ದೇಶದಲ್ಲಿ ಪ್ರತಿ ಗಂಟೆಗೆ 4 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ರಮಣ್ ಶುಕ್ಲಾ
ಅತ್ಯಾಚಾರ ಮುಕ್ತ ಭಾರತ ಆಂದೋಲನ ಅಭಿಯಾನ
ಬೆಂಗಳೂರು, ಮೇ 10: ದೇಶದಲ್ಲಿ ಪ್ರತಿ ಗಂಟೆಗೆ 4 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, 2022ರೊಳಗೆ ದೇಶದಿಂದ ಅತ್ಯಾಚಾರವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಅತ್ಯಾಚಾರ ಮುಕ್ತ ಭಾರತ ಆಂದೋಲನ ಆರಂಭಿಸಲಾಗಿದೆ ಎಂದು ಕೈಲಾಶ್ ಸತ್ಯಾರ್ಥಿ ಪ್ರತಿಷ್ಠಾನದ ಪ್ರತಿನಿಧಿ ರಮಣ್ ಶುಕ್ಲಾ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಮುಕ್ತ ಭಾರತ ಅಭಿಯಾನ ಭಾಗವಾಗಿ, ಕಾಂಗ್ರೆಸ್ ಮುಖಂಡ ರಿಝ್ವನ್ ಅರ್ಷದ್ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸೇರಿದಂತೆ ರಾಜ್ಯದಲ್ಲಿ 26 ರಾಜಕೀಯ ಅಭ್ಯರ್ಥಿಗಳು ಅತ್ಯಾಚಾರ ಮುಕ್ತ ಭಾರತ ಪ್ರತಿಜ್ಞೆಗೆ ಸಹಿ ಮಾಡಿದ್ದಾರೆ. ಈ ಅಭಿಯಾನವು ಕೈಲಾಶ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್ ಮತ್ತು ರಾಜ್ಯದಲ್ಲಿ ಸ್ಪಂದನಾ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚುತ್ತಿದ್ದು, ಪೊಸ್ಕೊ ಅಡಿಯಲ್ಲಿ ಮಕ್ಕಳ ವಿರುದ್ಧದ 4,455 ಅಪರಾಧ ಪ್ರಕರಣಗಳು ವರದಿಯಾಗಿವೆ. 2016ರಲ್ಲಿ ದೇಶದಾದ್ಯಂತ ಮಕ್ಕಳ ವಿರುದ್ಧ ದಾಖಲಾದ ಅಪರಾಧಗಳಲ್ಲಿ ನಾಲ್ಕು ಪ್ರತಿಶತದಷ್ಟು ರಾಜ್ಯದಿಂದಲೇ ವರದಿಯಾಗಿವೆ. 2016ರಲ್ಲಿ ದೇಶದಲ್ಲಿ ಮಕ್ಕಳ ವಿರುದ್ಧ ದಾಖಲಾದ ಒಟ್ಟು ಅಪರಾಧ ಘಟನೆಗಳ ಶೇಕಡವಾರು ಪಾಲಿನಲ್ಲಿ ರಾಜ್ಯ ಏಳನೇ ಸ್ಥಾನದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಅತ್ಯಾಚಾರ ಮುಕ್ತ ಭಾರತ ರಾಷ್ಟ್ರೀಯ ತುರ್ತಾಗಿದೆ. ಪರಿಣಾಮಕಾರಿ ಶಾಸನದ ಹೊರತಾಗಿ ನಮ್ಮ ಮಕ್ಕಳು ಹಾಗೂ ಮಹಿಳೆಯರು ಭಯಮುಕ್ತ ವಾತಾವರಣದಲ್ಲಿ ಬದುಕುವ ಖಾತ್ರಿಯಿಲ್ಲದಿರುವುದು ಈ ದೇಶದ ದುರಂತವಾಗಿದೆ. ರಾಜಕೀಯ ಇಚ್ಛಾಶಕ್ತಿ ಹಾಗೂ ಉತ್ತರದಾಯಿತ್ವ ಕೊರತೆ ಹಾಗೂ ಸಾಮಾಜಿಕ ಜವಾಬ್ದಾರಿ ಕೊರತೆಯಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂತಹ ಸಮಾಜಘಾತುಕ ಕೃತ್ಯಗಳಿಂದ ಮಹಿಳೆಯರನ್ನು ಮತ್ತು ಮಕ್ಕಳನ್ನು ರಕ್ಷಿಸುವ ಹೋರಾಟವು ನಿರಾಶದಾಯಕವಾಗಿದೆ ಎಂದು ಬೇಸರಪಟ್ಟರು.
ಅಭಿಯಾನದ ವಿಶೇಷ: ರಾಜ್ಯದ ಪ್ರತೀ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಮುಖ ರಾಜಕೀಯ ಪಕ್ಷಗಳ ಕನಿಷ್ಠ ಮೂವರು ಅಭ್ಯರ್ಥಿಗಳನ್ನು ಭೇಟಿಯಾಗಿ ಅತ್ಯಾಚಾರ ಮುಕ್ತ ಭಾರತ ನಿರ್ಮಾಣದ ಅವಶ್ಯಕತೆಯನ್ನು ವಿವರಿಸಿ ಹಾಗೂ ಚುನಾಯಿತರಾದಲ್ಲಿ ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತಿ ಅತ್ಯಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಬದ್ಧನಾಗಿರುತ್ತೇನೆ ಎಂದು(ವಿಡಿಯೋ ಹಾಗೂ ಫೋಟೋ ದಾಖಲೀಕರಿಸಿ) ಮಾಡಿಸಿ ಬದ್ಧತಾ ಪ್ರಮಾಣ ಪತ್ರಕ್ಕೆ ಸಹಿ ಮಾಡಿಸುವುದು.
ಪ್ರಕರಣಗಳು ವರದಿಯಾಗುತ್ತಿಲ್ಲ: ದೇಶದ ಶೇ.99 ರಷ್ಟು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿಲ್ಲ. ಪೋಕ್ಸೋಗೆ ಸಂಬಂಧಿಸಿದಂತೆ ಸುಮಾರು ಶೇ.89 ರಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿದ್ದು, ಇವುಗಳ ವಿಲೇವಾರಿಗೆ ನೂರಾರು ವರ್ಷಗಳೇ ಬೇಕಾಗುತ್ತದೆ. ಅಲ್ಲದೆ ಶೇ.30 ರಷ್ಟು ಚುನಾಯಿತ ಪ್ರತಿನಿಧಿಗಳ ಮೇಲೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯವೂ ಸೇರಿದಂತೆ ಇತರ ಅಪರಾಧಿಕ ಪ್ರಕಣಗಳಿವೆ.
ಬೇಡಿಕೆಗಳು: ಅತ್ಯಾಚಾರ ಮುಕ್ತ ದೇಶವಾಗಿ ಮಾರ್ಪಡಿಸುವ ಆಯವ್ಯಯವನ್ನು ಒಳಗೊಂಡ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸುವುದು. ಕೇಂದ್ರ ಸರಕಾರದ ಆಯವ್ಯಯದಲ್ಲಿ ಶೇ.10 ರಷ್ಟು ಮಕ್ಕಳ ಸಂರಕ್ಷಣೆಗೆ ಮೀಸಲು ಇಡುವುದು. ಅಲ್ಲದೆ ಯಾವುದೇ ಚುನಾಯಿತ ವ್ಯಕ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾದಾಗ ಅವರ ವಿಚಾರಣೆ ಮುಗಿಯುವ ಹಂತದವರೆಗೆ ಆತನನ್ನು ರಾಜಕೀಯ ಪಕ್ಷದಿಂದ ಅಮಾನತುಗೊಳಿಸಬೇಕು.







