ಮುಂಬೈ- ಮಂಗಳೂರು: ಜಿಎಸ್‌ಟಿ ವಂಚಿಸಿ ಸರಕು ಸಾಗಿಸುತ್ತಿದ್ದ 18 ಬಸ್‌ಗಳು ವಶ

ಮಂಗಳೂರು, ಮೇ 10: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಮಾಡಿ ಸರಕನ್ನು ಸಾಗಿಸುತ್ತಿದ್ದ ಶಂಕೆಯಲ್ಲಿ ಮುಂಬೈ-ಮಂಗಳೂರು ನಡುವೆ ಸಂಚರಿಸುವ 18 ಬಸ್‌ಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯ (ಬೆಂಗಳೂರು) ಮತ್ತು ಪಶ್ಚಿಮ ವಲಯ (ಮಂಗಳೂರು) ಜಾರಿ ವಿಭಾಗಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ-ಶೀರೂರು ನಡುವೆ ವಶಕ್ಕೆ ಪಡೆದಿವೆ.
ತೆರಿಗೆ ವಂಚಿಸಿ ಸರಕು ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಗುರುವಾರ ತಡರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮುರ್ಡೇಶ್ವರ-ಶೀರೂರು ನಡುವೆ ಅಂತರ್ ರಾಜ್ಯ ಬಸ್‌ಗಳ ತಪಾಸಣೆ ನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು, ಅಪಾರ ಪ್ರಮಾಣದ ಸರಕನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ 18 ಬಸ್‌ಗಳನ್ನು ತಪಾಸಣೆ ಮಾಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಿ ಸರಕು ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
‘ಎಲ್ಲ ಬಸ್‌ಗಳಲ್ಲೂ ಬೃಹತ್ ಪ್ರಮಾಣದ ಸರಕುಗಳನ್ನು ತರಲಾಗುತ್ತಿತ್ತು. 11 ಬಸ್‌ಗಳಲ್ಲಿ ಇದ್ದ ಸರಕುಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳು ಇರಲಿಲ್ಲ. ಜಿಎಸ್‌ಟಿ ವಂಚಿಸಿ ನಡೆಯುವ ವಹಿವಾಟಿಗೆ ಸಂಬಂಧಿಸಿದ ಸರಕುಗಳನ್ನು ಬಸ್‌ಗಳ ಮೂಲಕ ಸಾಗಣೆ ಮಾಡುತ್ತಿರುವ ಶಂಕೆ ಇದೆ. ಅಂತಹ ಎಲ್ಲ ಸರಕುಗಳನ್ನು ವಶಕ್ಕೆ ಪಡೆದಿದ್ದೇವೆ. ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಖರೀದಿದಾರರು ಮತ್ತು ಬಸ್‌ನವರಿಗೆ ಸೂಚಿಸಲಾಗಿದೆ’ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದರು.
ತೆರಿಗೆ ವಂಚನೆ ತಡೆಗೆ ಇಲಾಖೆಯು ತೀವ್ರ ನಿಗಾ ಇರಿಸಿದೆ. ವಾಣಿಜ್ಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳ ನಿರ್ದೇಶನ ದಂತೆ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರ ಮಧ್ಯರಾತ್ರಿ ಆರಂಭವಾದ ಕಾರ್ಯಾಚರಣೆ ಶುಕ್ರವಾರವೂ ನಡೆಯಿತು.
ಸಂಶಯಾಸ್ಪದ ಸರಕುಗಳಿದ್ದ ಬಸ್‌ಗಳನ್ನು ನೆಹರೂ ಮೈದಾನಕ್ಕೆ ತರಲಾಯಿತು. ಅಲ್ಲಿ ಸರಕುಗಳನ್ನು ಇಳಿಸಿ, ಬೇರೊಂದು ವಾಹನದಲ್ಲಿ ತುಂಬಿಸಿ ವಾಣಿಜ್ಯ ತೆರಿಗೆ ಇಲಾಖೆಯ ಪಶ್ಚಿಮ ವಲಯ ಕಚೇರಿಗೆ ತರಲಾಗಿದೆ. ಅಲ್ಲಿ ಎಲ್ಲ ಸರಕುಗಳನ್ನೂ ಇರಿಸಲಾಗಿದೆ ಎಂದು ತಿಳಿದುಬಂದಿದೆ.







