ಡಿಸ್ಟಿಲ್ಡ್ ನೀರಿನಿಂದ ಕಾರ್ಯಾಚರಿಸುವ ಆಮ್ಲಜನಕ ಹೊರಸೂಸುವ ಇಂಜಿನ್ ಆವಿಷ್ಕರಿಸಿದ ತಮಿಳುನಾಡು ಇಂಜಿನಿಯರ್

ಚಿತ್ರ ಕೃಪೆ: ANI
ಹೊಸದಿಲ್ಲಿ : ಡಿಸ್ಟಿಲ್ಡ್ ನೀರಿನಿಂದ ಕಾರ್ಯಾಚರಿಸಬಲ್ಲ ಹಾಗೂ ಆಮ್ಲಜನಕ ಹೊರಸೂಸುವ ಪರಿಸರ ಸ್ನೇಹಿ ಇಂಜಿನ್ ಒಂದನ್ನು ತಮಿಳುನಾಡಿನ ಕೊಯಂಬತ್ತೂರು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಸೌಂತಿರಾಜನ್ ಕುಮಾರಸ್ವಾಮಿ ಆವಿಷ್ಕರಿಸಿದ್ದಾರೆ. ಅವರ ಕಳೆದ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಇಂತಹ ಒಂದು ಆವಿಷ್ಕಾರ ಸಾಧ್ಯವಾಗಿದೆ. ಅದು ಜಲಜನಕ (ಹೈಡ್ರೋಜನ್) ಅನ್ನು ಇಂಧನವಾಗಿ ಬಳಸಿ ನಂತರ ಆಮ್ಲಜನಕವನ್ನು ಹೊರ ಬಿಡುತ್ತದೆ. ಸೊನ್ನೆ ಪ್ರಮಾಣದ ಮಾಲಿನ್ಯ ಉಂಟು ಮಾಡುವ ಇಂಜಿನ್ ಒಂದನ್ನು ಇದೇ ಮೊದಲ ಬಾರಿಗೆ ಜಗತ್ತಿನಲ್ಲಿ ಆವಿಷ್ಕರಿಸಲಾಗಿದೆ.
ಕುಮಾರಸ್ವಾಮಿ ಅವರು ಕೊಯಂಬತ್ತೂರು ಮೂಲದ ಎನ್ಜಿ ಆಟೋಮೊಬೈಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಆಡಳಿತ ನಿರ್ದೇಶಕರೂ ಆಗಿದ್ದಾರೆ.
ತಮ್ಮ ಈ ಕ್ರಾಂತಿಕಾರಿ ಇಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶದಿಂದ ಅವರು ಜಪಾನ್ ಸರಕಾರವನ್ನು ಸಂಪರ್ಕಿಸಿದ್ದು ಅಲ್ಲಿನ ಅಧಿಕೃತ ವ್ಯಾಪಾರ ಉತ್ತೇಜನಾ ಸಂಸ್ಥೆ ಜಪಾನ್ ಎಕ್ಸ್ಟರ್ನಲ್ ಟ್ರೇಡ್ ಆರ್ಗನೈಝೇಶನ್ ಕುಮಾರಸ್ವಾಮಿ ಜತೆ ಸೇರಿ ಈ ಇಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಜೆಟ್ರೋದ ಇನ್ವೆಸ್ಟ್ ಜಪಾನ್ ಪ್ರೊಗ್ರಾಂ ಅನ್ವಯ ಅವರ ಆವಿಷ್ಕಾರ ಅನುಮೋದನೆಗೊಂಡಿದೆ.







