ಮೆಜಸ್ಟಿಕ್ ನಿಂದ ತಪ್ಪಿಸಿಕೊಂಡ ಇನ್ನೊಬ್ಬ 'ಶಂಕಿತ' ಮೊದಲ ಬಾರಿ ಮೆಟ್ರೋ ರೈಡ್ ಬಯಸಿದ್ದ ನಿರ್ವಸಿತ

ಬೆಂಗಳೂರಿನ: ರಾಜಧಾನಿಯ ಮೆಜಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ತಪಾಸಣೆಗೊಳಗಾಗಲು ಇತ್ತೀಚೆಗೆ ನಿರಾಕರಿಸಿ ಸಂಶಯಕ್ಕೆ ಕಾರಣನಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಗುರುತಿಸಿದ್ದು ಆತನ ಹೆಸರು ಸಾಜಿದ್ ಖಾನ್ ಹಾಗೂ ಆತ ನಿರ್ವಸಿತನೆಂದು ತಿಳಿದು ಬಂದಿದೆ. ಆತ ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಮೆಟ್ರೋ ಸ್ಟೇಶನ್ ಸಮೀಪದ ಮಸೀದಿಯ ಹೊರಗೆ ಭಿಕ್ಷೆ ಬೇಡುತ್ತಿರುವವನೆಂದು ಆತನ ವಿಚಾರಣೆ ವೇಳೆ ತಿಳಿದು ಬಂದಿದೆ. ನಾಲ್ಕು ವಿಶೇಷ ಪೊಲೀಸ್ ತಂಡಗಳು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದವು. ಸಾಜಿದ್ ರಾಜಸ್ಥಾನ ಮೂಲದವನೆಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ವ್ಯಕ್ತಿಯನ್ನು ‘ಶಂಕಿತ ಉಗ್ರ’ ಎಂದು ಕರೆದು ಟಿವಿ ಚಾನೆಲ್ ಗಳು ವ್ಯಾಪಕ ವದಂತಿಗಳನ್ನು ಹರಡಿ ನಗರದಲ್ಲಿ ಆತಂಕ ಸೃಷ್ಟಿಸಿದ್ದವು. ಆದರೆ ಆ ವ್ಯಕ್ತಿ ಗಡಿಯಾರ ವ್ಯಾಪಾರಿ ರಿಯಾಝ್ ಅಹ್ಮದ್ ಎನ್ನುವುದು ನಂತರ ಬೆಳಕಿಗೆ ಬಂದಿತ್ತು. ಘಟನೆ ಬಳಿಕ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ವಿರುದ್ಧ ರಿಯಾಝ್ ಅಹ್ಮದ್ ದೂರು ದಾಖಲಿಸಿದ್ದರು.
ಪೊಲೀಸರ ಪ್ರಕಾರ ಘಟನೆ ನಡೆದ ದಿನ ಸಾಜಿದ್ ನಿಗೆ ಸಾಕಷ್ಟು ನಾಣ್ಯಗಳು ಭಿಕ್ಷೆ ರೂಪದಲ್ಲಿ ದೊರಕಿದ್ದವು. ಈ ಹಣ ಬಳಸಿ ಮೆಟ್ರೋದಲ್ಲಿ ಪ್ರಯಾಣಿಸುವ ಕನಸು ಈಡೇರಿಸಬೇಕೆಂದು ಆತ ಆ ದಿನ ಆಗಮಿಸಿದ್ದ. ಆದರೆ ಅತ ಮೆಟ್ರೋದ ಲೋಹ ಶೋಧಕ ಪ್ರವೇಶಿಸಿದಾಗ ಆತನ ಕಿಸೆಯಲ್ಲಿದ್ದ ನಾಣ್ಯಗಳಿಂದಾಗಿ ಅಲಾರ್ಮ್ ಸದ್ದಾಗಿತ್ತು. ಆಗ ಅಧಿಕಾರಿಗಳು ಆತನನ್ನು ತಪಾಸಣೆಗೈಯ್ಯಲು ಮುಂದಾದರೂ ಆತ ನಿರಾಕರಿಸಿದ್ದ. ಅಲ್ಲಿನ ಅಧಿಕಾರಿ ಆತನ ಜತೆ ಕನ್ನಡದಲ್ಲಿ ವ್ಯವಹರಿಸಲು ಯತ್ನಿಸಿದ್ದರು. ಆದರೆ ಭಾಷೆ ಅರಿಯದ ಆತನಿಗೆ ಏನೆಂದು ತಿಳಿಯದೆ ತಾನೇನೋ ತಪ್ಪು ಮಾಡುತ್ತಿದ್ದೇನೆ ಎಂದು ಅಂದುಕೊಂಡು ಆತ ಅಲ್ಲಿಂದ ಹೊರ ನಡೆದಿದ್ದನೆಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.
ಆತ ಮೆಟ್ರೋದಿಂದ ಹೊರನಡೆಯುತ್ತಿದ್ದಂತೆಯೇ ಪೊಲೀಸರು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಅಲರ್ಟ್ ಘೋಷಿಸಿದ್ದರು. ನಂತರ ವಿಶೇಷ ತಂಡ ಆತನನ್ನು ಮಸೀದಿಯ ಸಮೀಪ ಪತ್ತೆ ಹಚ್ಚಿದ್ದು ಆತನಿಂದ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.







