ಕಡ್ತಲದಲ್ಲಿ ವರ್ಮಿಪಿಲ್ಟರ್ ಶೌಚಾಲಯ ಗುಂಡಿ ನಿರ್ಮಾಣ
ದೇಶದಲ್ಲೇ ಪ್ರಪ್ರಥಮ ಪ್ರಯೋಗ: 50 ಮನೆಗಳಿಗೆ ಶೌಚಾಲಯ

ಉಡುಪಿ, ಮೇ 11: ಕೇಂದ್ರ ಸರಕಾರದ ವತಿಯಿಂದ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ), ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಪವರ್ ಓವರ್ ಕಂಪನಿಯ ಸಹಯೋಗದೊಂದಿಗೆ ದೇಶದಲ್ಲಿ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಮಿಪಿಲ್ಟರ್ ಶೌಚಾಲಯ ಗುಂಡಿ(ಟೈಗರ್ ಶೌಚಾಲಯ)ಯನ್ನು ನಿರ್ಮಿಸ ಲಾಗಿದೆ.
ಇದು ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಕಡ್ತಲ ಗ್ರಾಪಂ ವ್ಯಾಪ್ತಿಯ ಅಶೋಕ ನಗರ, ಮುಳ್ಳಾಜಾಲು, ದರ್ಬುಜೆ ಮತ್ತು ಗೋಳಿಪಲ್ಕೆ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಕುರಿತು ಆಸಕ್ತಿ ವಹಿಸಿ ಮುಂದೆ ಬಂದಿ ರುವ 50 ಮನೆಗಳಲ್ಲಿ ಈ ಶೌಚಾಲಯ ಗುಂಡಿ ನಿರ್ಮಿಸಲಾಗಿದೆ. ಈಗಾಗಲೇ ಬಯಲು ಶೌಚಾಲಯ ಮುಕ್ತ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಡ್ತಲದಲ್ಲಿ ಶೌಚಾಲಯ ಹೊಂದಿರುವ ಮನೆಗಳಲ್ಲಿಯೇ ಈ ನೂತನ ಗುಂಡಿ ಯನ್ನು ತೋಡಲಾಗಿದೆ.
ಪ್ರಸ್ತುತ ಶೌಚಾಲಯದ ಗುಂಡಿಯು 4 ಅಡಿ ಆಳ ಹೊಂದಿದ್ದು, ಇದರಿಂದ ಜಲಮೂಲಗಳು ಕಲುಷಿತವಾಗದಂತೆ ತಂತ್ರಜ್ಞಾನವನ್ನು ಅಳವಡಿ ಸಲಾಗಿದೆ. ಇದರಲ್ಲಿ ಟೈಗರ್ ವರ್ಮ್(ಎರೆಹುಳ ಮಾದರಿ) ಎಂಬ ಕೀಟವನ್ನು ಬಿಡಲಾಗು ತ್ತದೆ. ಈ ಕೀಟಗಳು ಮಾನವ ತ್ಯಾಜ್ಯವನ್ನು ತನ್ನ ಆಹಾರವನ್ನಾಗಿಸಿ ನೀರನ್ನು ಶುದ್ಧೀಕರಿಸಿ ವರ್ಮಿ ಕಾಂಪೋಸ್ಟ್ ಆಗಿ ಪರಿವರ್ತಿಸುತ್ತದೆ. ಇದು ಪರಿಸರ ಸ್ನೇಹಿ ಯಾಗಿ ಸುಮಾರು 12 ವರ್ಷಗಳ ಕಾಲ ಬಳಕೆಗೆ ಯೋಗ್ಯವಾಗಿರುತ್ತದೆ ಎನ್ನು ತ್ತಾರೆ ಸ್ವಚ್ಛ ಭಾರತ್ ಮಿಷನ್‌ನ ಉಡುಪಿ ಜಿಲ್ಲಾ ಸಂಯೋಜಕ ರಘುನಾಥ.
ಈ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 100 ಕುಟುಂಬಗಳಿಗೆ ಟೈಗರ್ ಶೌಚಾಲಯ ಮಂಜೂರಾಗಿದ್ದು, ಇದರಲ್ಲಿ 50 ಕುಟುಂಬ ಗಳನ್ನು ಕಡ್ತಲ ಗ್ರಾಪಂನಿಂದ ಆಯ್ಕೆ ಮಾಡಲಾಗಿದೆ. ಉಳಿದ 50 ಫಲಾನುಭವಿಗಳನ್ನು ಅಂಬಲಪಾಡಿ, ಅಲೆವೂರು ಹಾಗೂ ವರಂಗ ಗ್ರಾಮ ಪಂಚಾಯತ್‌ಗಳಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಗುಂಡಿಯಲ್ಲಿರುವ ಹುಳದಿಂದ ತ್ಯಾಜ್ಯವು ಗೊಬ್ಬರವಾಗಿ ಪರಿವರ್ತನೆಗೊಳ್ಳ ಲಿದ್ದು, ಗೊಬ್ಬರ ಅಗತ್ಯವಿದ್ದಲ್ಲಿ ಮನೆಯವರು ಗ್ರಾಪಂಗೆ ಮಾಹಿತಿ ನೀಡಿದರೆ ಸಂಬಂಧಪಟ್ಟ ಕಂಪೆನಿಯವರಿಗೆ ತಿಳಿಸಲಾಗುತ್ತದೆ. ಅವರೇ ಬಂದು ಈ ಗೊಬ್ಬರವನ್ನು ತೆಗೆದುಕೊಡುತ್ತಾರೆ. ಯಾವುದೇ ದುವಾರ್ಸನೆ ಇಲ್ಲದ ಈ ಗೊಬ್ಬರವನ್ನು ತರಕಾರಿ, ಹೂವು ಗಿಡಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಕಡ್ತಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಜಾನ ತಿಳಿಸಿದ್ದಾರೆ.
ಟೈಗರ್ ಶೌಚಾಲಯ ಬಳಕೆ ಬಗ್ಗೆ ಅರಿವು
ಟೈಗರ್ ಶೌಚಾಲಯದ ಬಳಕೆ ಮತ್ತು ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮೇ 9ರಂದು ಕಡ್ತಲ ಗ್ರಾಪಂ ವ್ಯಾಪ್ತಿಯ ಆಯಾ ಕಾಲೋನಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛ ಭಾರತ್ ಮಿಷನ್‌ನ ಉಡುಪಿ ಜಿಲ್ಲಾ ಸಂಯೋಜಕ ರಘುನಾಥ ಫಲಾನುಭವಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪವರ್ ಓವರ್ ಕಂಪನಿಯ ಪರಿಸರ ವಿಜ್ಙಾನಿ ಸುವರ್ಣ ಸಾಂವತ್ ಫಲಾನು ಭವಿಗಳಿಗೆ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಬಿಳಿ ಹಾರ್ಪಿಕ್ ವಿತರಣೆ ಮಾಡಿದರು.
ಪವರ್ ಓವರ್ ಕಂಪನಿಯ ಸಂಯೋಜಕ ಶರತ್ ಮತ್ತು ಸ್ವಚ್ಛ ಭಾರತ್ ಮಿಷನ್ ಗುತ್ತಿಗೆದಾರ ವೆಂಕಟೇಶ್, ಕಡ್ತಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಝಾನ ಎಂ. ಉಪಸ್ಥಿತರಿದ್ದರು.
ಟೈಗರ್ ಶೌಚಾಲಯದ ಪ್ರಾಯೋಗಿಕ ಯೋಜನೆ ಕಡ್ತಲ ಗ್ರಾಪಂನಲ್ಲಿ ಜಾರಿಗೆ ತರಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿ ಸಾಗುತ್ತಿದೆ. ಜಲಮೂಲ ಸಂರಕ್ಷಣೆ ಜೊತೆ ಪರಿಸರ ರಕ್ಷಣೆಯ ಉದ್ದೇಶ ಕೂಡ ಇದರಲ್ಲಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಯಾವುದೇ ತೊಂದರೆಗಳು ಎದುರಾದಲ್ಲಿ ಗ್ರಾಪಂಗೆ ಮಾಹಿತಿ ನೀಡಿದರೆ ಕೂಡಲೇ ಸರಿಪಡಿಸಿಕೊಡಲಾಗುವುದು.
-ಫರ್ಝಾನ ಎಂ., ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಡ್ತಲ ಗ್ರಾಪಂ.








