ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ಅಭ್ಯರ್ಥಿಯ ವಿರುದ್ಧ ಪೋಕ್ಸೋ ಕೇಸ್

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೀಲಾಂಜನ್ ರಾಯ್ ವಿರುದ್ಧ 17 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊರಿಸಲಾಗಿದೆ. ಎಪ್ರಿಲ್ 26ರಂದು ಯುವತಿ ಮತ್ತಾಕೆಯ ತಂದೆ ದೂರು ಸಲ್ಲಿಸಲು ರಾಯ್ ಬಳಿ ಹೋದಾಗ ಈ ಘಟನೆ ನಡೆದಿತ್ತೆನ್ನಲಾಗಿದೆ. ಮರುದಿನವೇ ದೂರು ದಾಖಲಾಗಿದ್ದು ರಾಯ್ ವಿರುದ್ಧ ಪೋಕ್ಸೋ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ
ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಹೇಳಿದೆ. ಆದರೆ ಪೊಲೀಸರು ರಾಯ್ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಆಯೋಗದ ಅಧ್ಯಕ್ಷೆ ಅನನ್ಯಾ ಚಟರ್ಜಿ ಚಕ್ರಬರ್ತಿ ಹೇಳಿದ್ದಾರೆ.
ಘಟನೆ ಬಗ್ಗೆ ಆಯೋಗಕ್ಕೆ ಶುಕ್ರವಾರವಷ್ಟೇ ತಿಳಿದಿದ್ದು ರಾಯ್ ಅವರನ್ನು ಕೂಡಲೇ ಬಂಧಿಸುವಂತೆ ಆದೇಶಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಮಕ್ಕಳ ಹಕ್ಕು ಆಯೋಗದ ಪದಾಧಿಕಾರಿಗಳು ಸಂತ್ರಸ್ತೆಯನ್ನು ಆಕೆಯ ನಿವಾಸದಲ್ಲಿ ಭೇಟಿಯಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಜಯಪ್ರಕಾಶ್ ಮಜೂಮ್ದಾರ್, ತೃಣಮೂಲ ಕಾಂಗ್ರೆಸ್ ಪಕ್ಷ ಸುಳ್ಳು ದೂರು ದಾಖಲಿಸಿದೆ ಎಂದು ಆರೋಪಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಡೈಮಂಡ್ ಹಾರ್ಬರ್ ಪೊಲೀಸರು ತಿಳಿಸಿದ್ದಾರೆ. ನೀಲಾಂಜನ್ ರಾಯ್ ಅವರು ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಮೇ 19ರಂದು ನಡೆಯಲಿರುವ ಚುನಾವಣೆಯಲ್ಲಿ ಎದುರಿಸಲಿದ್ದಾರೆ.







