ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಯ ಸುಪ್ರೀಂ ತೀರ್ಪಿಗೆ ಪಿಎಫ್ಐ ಸ್ವಾಗತ: ಮುಹಮ್ಮದ್ ಸಾಕಿಬ್

ಬೆಂಗಳೂರು: ಎಸ್ಸಿ-ಎಸ್ಟಿಗೆ ಸೇರಿದ ಸರಕಾರಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿಯನ್ನು ಮಂಜೂರು ಮಾಡಿರುವ 2017ರ ಕರ್ನಾಟಕ ಸರಕಾರದ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ತೀರ್ಪು ಬಹಳಷ್ಟು ಸಹಾಯಕವಾಗಲಿದೆ. ಭಡ್ತಿ ಮೀಸಲಾತಿ ಜಾರಿಯಾದರೆ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಕೂಗನ್ನು ಎಬ್ಬಿಸಲಾಗುತ್ತಿದೆ. ಇಂತಹ ಸೋಗಲಾಡಿತನದ ಮಾತುಗಳು ಕೇವಲ ಜಾತಿವಾದಿ ಗಳು ಮತ್ತು ಮೇಲ್ವರ್ಗದ ಪರವಾದ ಹಿತಾಸಕ್ತಿಗಳಿಂದಷ್ಟೇ ಕೇಳಿ ಬರಲು ಸಾಧ್ಯ. ಭಡ್ತಿ ಮೀಸಲಾತಿಯಿಂದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ದೊರಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದುಳಿದ ಸಮುದಾಯಗಳ ಸಬಲೀಕರಣವು ಯಾವುದೇ ಒಂದು ಆಡಳಿತ ಸರಕಾರದ ಮಹತ್ವದ ಹೊಣೆಗಾರಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಶೋಷಿತ ಮತ್ತು ಮೂಲೆಗೆಸೆಯಲ್ಪಟ್ಟ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ರಾಜ್ಯ ಸರಕಾರದ ಇಂತಹ ಜನಪರವಾದ ನಿಲುವು ಶ್ಲಾಘನೀಯವಾಗಿದೆ. ಆಡಳಿತ ಸರಕಾರವು ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಅವರ ಸಮಾಜೋ-ಆರ್ಥಿಕ ಸ್ಥಿತಿಗತಿಯಲ್ಲಿ ಸುಧಾರಣೆ ತರಬಹುದಾಗಿದ್ದು, ಈ ನಿಟ್ಟಿನಲ್ಲಿ ಅದು ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಮುಹಮ್ಮದ್ ಸಾಕಿಬ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







