ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ನಿಧನ

ಉಡುಪಿ, ಮೇ 11: ಬಡಗುತಿಟ್ಟಿನ ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಮೇ 11ರಂದು ಬೆಳಗ್ಗೆ ಹೃದಯಾಘಾತದಿಂದ ನೆಬ್ಬೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಇವರು ಕೊಡ್ಲಿಪಾಲು ಗಣಪತಿ ಹೆಗಡೆಯವರ ಪ್ರೇರಣೆಯಿಂದ ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಾಗಿ ಶ್ರೇಷ್ಠ ಭಾಗವತರಾಗಿ ಮೂಡಿಬಂದರು. ಸುಮಾರು ಆರು ದಶಕಗಳ ಕಾಲ ತಮ್ಮ ಗಾನ ಸುಧೆಯನ್ನು ಕಲಾರಸಿಕರಿಗೆ ಉಣಬಡಿಸಿದ್ದಾರೆ.
ಯಕ್ಷಗಾನದ ಅನನ್ಯ ಭಾಗವತರಾಗಿದ್ದ ಅವರು ದೀರ್ಘ ಕಾಲ ಇಡಗುಂಜಿ ಮೇಳದಲ್ಲಿ ಕಲಾಸೇವೆಗೈದಿದ್ದರು. ಸಾಲಿಗ್ರಾಮ ಮೇಳದಲ್ಲಿ ಎರಡು ವರ್ಷ ಅಮೃತೇಶ್ವರಿ, ಪಂಚಲಿಂಗ, ಮೂರೂರು ಮೇಳಗಳಲ್ಲಿ ತಲಾ ಒಂದು ವರ್ಷದ ತಿರುಗಾಟ ನಡೆಸಿದ್ದಾರೆ. ಕೆರೆಮನೆ ಶಂಭು ಹೆಗಡೆಯವರ ಪಾತ್ರಗಳಿಗೆ ನೆಬ್ಬೂರರ ಭಾಗವತಿಕೆ ಒಂದು ಅಪೂರ್ವ ಕೊಡುಗೆಯಾಗಿದೆ.
ಇವರ ಕಲಾಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಉಪ್ಪೂರು ಪ್ರಶಸ್ತಿ ನೀಡಿ ಗೌರವಿಸಿದೆ. ಹತ್ತು ವರ್ಷಗಳ ಹಿಂದೆ ‘ನೆಬ್ಬೂರು ಪರಿಚಯ’ ಸ್ವರಚಯ ಶಿಷಿಕೆರ್ಯಲ್ಲಿ ಸಾಕ್ಷ್ಯಚಿತ್ರ ರಚಿಸಲಾಗಿತ್ತು.
ಇವರು ಪತ್ನಿ ಶರಾವತಿ, ಇಬ್ಬರು ಮಕ್ಕಳು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅಗಲಿದ ಚೇತನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.







