ಪುತ್ತೂರು: ಮಸೀದಿಗಳಿಗೆ ಬಾಟಲಿ ಎಸೆದ ಕಿಡಿಗೇಡಿಗಳು

ಪುತ್ತೂರು: ಮೂರು ಮಸೀದಿಗಳಿಗೆ ಕಿಡಿಗೇಡಿಗಳು ಬಾಟಲಿ ಎಸೆದು ಪರಾರಿಯಾದ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿಯ ಮಸ್ಜಿದುಲ್ ಬಾರಿ ಜುಮಾ ಮಸೀದಿ, ಸರ್ವೆ ಗ್ರಾಮದ ದರ್ಬೆ ಬೈತುಲ್ ರಹ್ಮಾನ್ ಜುಮಾ ಮಸೀದಿ ಮತ್ತು ಸರ್ವೆ ಕೂಡುರಸ್ತೆ ಎಂಬಲ್ಲಿರುವ ರಿಫಾಯಿಯಾ ಮದ್ರಸ ಸೇರಿದಂತೆ 3 ಧಾರ್ಮಿಕ ಸ್ಥಳಗಳಲ್ಲಿ ರಾತ್ರಿ ಸುಮಾರು 1ರಿಂದ 1-30ರ ನಡುವೆ ಬಾಟಲಿಯನ್ನು ಎಸೆಯಲಾಗಿದೆ.
ತಿಂಗಳಾಡಿ ಮಸೀದಿಗೆ ಎಸೆದ ಬಾಟಲಿಯು ಮಸೀದಿಯ ಮುಂಭಾಗದ ಅಂಗಳದಲ್ಲಿ ಒಡೆದು ಚೂರಾಗಿದೆ. ದರ್ಬೆ ಮಸೀದಿಯ ಮುಂಭಾಗದಲ್ಲಿಯೂ ಬಾಟಲಿ ಎಸೆಯಲಾಗಿದ್ದು, ಈ ಸಂದರ್ಭ ಮಸೀದಿಯಲ್ಲಿ ಯಾರೂ ಇಲ್ಲದ ಕಾರಣ ತಕ್ಷಣಕ್ಕೆ ವಿಚಾರ ಗಮನಕ್ಕೆ ಬಂದಿರ ಲಿಲ್ಲ. ಕೂಡುರಸ್ತೆ ಮಸೀದಿಯ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಮಸೀದಿಯ ಖತೀಬ್ ಯಾಕೂಬ್ ದಾರಿಮಿ ಎಂಬವರು ಮದ್ರಸದಲ್ಲಿ ಮಲಗಿದ್ದರು ಎನ್ನಲಾಗಿದ್ದು, ತನ್ನ ಕೊಠಡಿಗೆ ಗಾಳಿಗೆಂದು ಕಿಟಿಕಿ ತೆರೆದಿಟ್ಟು ಮಲಗಿದ್ದರು. ತಡರಾತ್ರಿ ಕಿಟಿಕಿಗೆ ಬಾಟಲಿ ಎಸೆದ ಶಬ್ದ ಕೇಳಿ ಅವರು ಎಚ್ಚರಗೊಂಡ ವೇಳೆಯಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಖತೀಬರು ಮಲಗಿದ್ದ ಕೊಠಡಿಯ ಒಳಭಾಗಕ್ಕೆ ಹಾಗೂ ಹೊರಭಾಗಕ್ಕೆ ಬಾಟಲಿ ಚೂರಾಗಿ ಬಿದ್ದಿದೆ. ಮೂರು ಕಡೆಗಳಲ್ಲಿ ಒಂದೇ ತಂಡವು ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ.
ಈ ಮೂರು ಮಸೀದಿಗಳಲ್ಲಿಯೂ ಸಿಸಿ ಕ್ಯಾಮರ ಇಲ್ಲದ ಕಾರಣ ಆರೋಪಿಗಳ ಗುರುತು ಹಿಡಿಯಲು ಸಾಧ್ಯವಾಗಿಲ್ಲ.
ಮಸೀದಿಗೆ ಬಾಟಲಿ ಎಸೆದಿರುವುದು ಖಂಡನೀಯವಾಗಿದೆ. ಇದೊಂದು ಅಶಾಂತಿ ಸೃಷ್ಠಿಸುವ ಹುನ್ನಾರವಾಗಿದ್ದು, ಇಂತಹ ಪ್ರಯತ್ನ ಸಫಲವಾಗದು. ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಮಸೀದಿಯ ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಕೂಡುರಸ್ತೆ ಮಸೀದಿಯ ಅಧ್ಯಕ್ಷ ಪಿ.ಕೆ. ಮಹಮ್ಮದ್ ಕೂಡುರಸ್ತೆ ತಿಳಿಸಿದ್ದಾರೆ.
ಭದ್ರತೆಯ ದೃಷ್ಠಿಯಿಂದ ತಿಂಗಳಾಡಿ ಜುಮಾ ಮಸೀದಿಗೆ ಶೀಘ್ರದಲ್ಲಿಯೇ ಸಿಸಿ. ಕ್ಯಾಮರಾ ಆಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ ಕಣ್ಣೂರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಪ್ಯ ಠಾಣಾಧಿಕಾರಿ ಸಕ್ತಿವೇಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಸೀದಿ ಮುಖಂಡರೊಂದಿಗೆ ಮಾತುಕತೆ ನಡೆಸಿರುವ ಅವರು ದುಷ್ಕೃತ್ಯ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.







