ಮೈತ್ರಿ ಸರಕಾರ ಪತನ ಆಗದಿದ್ದರೆ ಬಿಜೆಪಿಯವರು ರಾಜೀನಾಮೆ ನೀಡುವರೇ: ಸಚಿವ ಕಾಶೆಂಪೂರ್ ಪ್ರಶ್ನೆ

ಕಲಬುರಗಿ, ಮೇ 11: ‘ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಿ. ಮೇ 28ರ ಅಲ್ಲ, ಇನ್ನೂ ಎಂಟು ದಿನ ತೆಗೆದುಕೊಳ್ಳಿ’ ಎಂದು ಬಿಜೆಪಿ ಮುಖಂಡರಿಗೆ ಸವಾಲು ಹಾಕಿರುವ ಸಚಿವ ಬಂಡೆಪ್ಪ ಕಾಶೆಂಪೂರ್, ‘ಮೈತ್ರಿ ಸರಕಾರ ಪತನವಾಗದಿದ್ದರೆ ಬಿಜೆಪಿಯವರು ರಾಜೀನಾಮೆ ಕೊಡ್ತಾರಾ’ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಪತನಕ್ಕೆ ಬಿಜೆಪಿ ಮುಖಂಡರು ನೀಡಿದ ಎಲ್ಲ ಗಡುವುಗಳು ಮುಗಿದು ಹೋಗಿವೆ. ಅವರು ಸರಕಾರ ಬೀಳಿಸಲು ಮುಂದಾದರೆ ಸರಕಾರದಲ್ಲಿರುವ ನಾವೇನು ಗೋಲಿ ಆಡ್ತಿರ್ತಿತೀವಾ ಎಂದು ಖಾರವಾಗಿ ಕೇಳಿದರು.
ಶಾಸಕ ರಮೇಶ್ ಜಾರಕಿಹೊಳಿ ಸೇರಿ ಯಾವೊಬ್ಬ ಶಾಸಕನೂ ಪಕ್ಷ ಬಿಟ್ಟು ಹೋಗುವುದಿಲ್ಲ. ಎರಡು ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಪಕ್ಷೇತರ ಶಾಸಕರು ಈಗಾಗಲೇ ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿದ್ದು, ಸರಕಾರ ಸುಭದ್ರವಾಗಿದೆ ಎಂದು ಹೇಳಿದರು.
ಜೆಡಿಎಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆಳಹಂತದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದ ಅವರು, ರಾಹುಲ್ ಗಾಂಧಿ ಮತ್ತು ದೇವೇಗೌಡರ ಒಪ್ಪಂದದಂತೆ ಮೈತ್ರಿ ಸರಕಾರ ರಚನೆಯಾಗಿದೆ. ಇನ್ನೂ 4 ವರ್ಷ ನಿರಾತಂಕವಾಗಿ ಸರಕಾರ ಸುಗಮವಾಗಿ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಅಥವಾ ಜೆಡಿಎಸ್ ಯಾರೇ ಆಗಿದ್ದರೂ, ಮೈತ್ರಿ ಸರಕಾರಕ್ಕೆ ಮುಜುಗರ ಸೃಷ್ಟಿಸುವ ಹೇಳಿಕೆ ನೀಡಬಾರದು. ಏನೇ ಮಾತನಾಡಿಕೊಳ್ಳುವುದಿದ್ದರೂ ಅವರ ಮನೆಯಲ್ಲಿ ಮಾತನಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ನಮ್ಮದು ‘ಉದ್ರಿ’ ಸರಕಾರ ಅಲ್ಲ, ನಮ್ಮದು ನಗದು ಸರಕಾರ. ನಾವು ನಿಗದಿಯಂತೆ ರೈತರ ಸಾಲಮನ್ನಾ ಮಾಡುತ್ತೇವೆ. ಋಣಮುಕ್ತ ಪತ್ರವನ್ನು ಕೊಟ್ಟಿದ್ದೇವೆ. ಸಾಲಮನ್ನಾ ಯಾವಾಗ ಆಗುತ್ತೆ ಅನ್ನುವ ಪತ್ರವನ್ನು ರೈತರಿಗೆ ಬರೆದಿದ್ದೇವೆ ಎಂದು ಕಾಶಂಪೂರ್ ಇದೇ ವೇಳೆ ಸ್ಪಷ್ಟಣೆ ನೀಡಿದರು.







