ಶೂನ್ಯತ್ಯಾಜ್ಯ ನಿರ್ವಹಣೆಗೆ ಉಳ್ಳಾಲ ಮಾದರಿಯಾಗಲಿ: ಡಾ.ಒಲಿಂಡ ಪಿರೇರಾ

ಮಂಗಳೂರು, ಮೇ 11: ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಉಳ್ಳಾಲವು ಶೂನ್ಯ ತ್ಯಾಜ್ಯ ನಿರ್ವಹಣೆಗೆ ಮಾದರಿಯಾಗಬೇಕು ಎಂದು ಮಂಗಳೂರು ರೋಶನಿ ನಿಲಯ ಕಾಲೇಜಿನ ಸ್ಥಾಪಕ ಪ್ರಾಂಶುಪಾಲೆ ಡಾ.ಒಲಿಂಡಾ ಪಿರೇರಾ ತಿಳಿಸಿದರು.
ಉಳ್ಳಾಲ ನಗರಸಭೆಯು ಏರ್ಪಡಿಸಿದ್ದ ಸ್ವಚ್ಛತಾ ಜ್ಞಾನ ಅಭಿಯಾನ-2019ರ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರೋಶನಿ ನಿಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಕಿಶೋರ್ ಅತ್ತಾವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನಶೆಟ್ಟಿ, ಉಳ್ಳಾಲ ನಗರಸಭಾ ವ್ಯಾಪ್ತಿಯ ಶಾಲೆಗಳಲ್ಲಿ ನಡೆದ ಸ್ವಚ್ಛತಾ ಕಾರ್ಯಗಾರವನ್ನು ಶ್ಲಾಘಿಸಿದರು.
ಉಳ್ಳಾಲ ನಗರಸಭೆ ಪೌರಾಯುಕ್ತ ಶ್ರೀನಿವಾಸಮೂರ್ತಿ ಅವರು, ಉಳ್ಳಾಲದ 42 ಶಾಲೆಗಳ 10 ಸಾವಿರ ವಿದ್ಯಾರ್ಥಿಗಳಿಗೆ ಕಾರ್ಯಗಾರದ ಮೂಲಕ ಸ್ವಚ್ಛತೆಯ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರಮಿಸಿದ ಮಂಗಳೂರಿನ ರೋಶನಿ ನಿಲಯದ ವಿದ್ಯಾರ್ಥಿಗಳು ಮತ್ತು ಉಳ್ಳಾಲ ಹಾಗೂ ಪೆರ್ಮನ್ನೂರಿನ ಸಿಆರ್‌ಪಿಗಳಿಗೆ ನಗರಸಭೆಯ ಪರವಾಗಿ ಅಭಿನಂದನಾ ಪತ್ರವನ್ನು ವಿತರಿಸಿದರು.
ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಉಳ್ಳಾಲ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಜೇಶ್ ಹಾಗೂ ಸಾಜಿದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಶನಿ ನಿಲಯದ ವಿದ್ಯಾರ್ಥಿಗಳಾದ ಪುಷ್ಪಜಾ, ಖುಷ್ಬು, ರಚನಾ ಶೆಟ್ಟಿ ಹಾಗೂ ಪೆರ್ಮನ್ನೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಹರ್ಷಲತಾ ಕಾರ್ಯಾಗಾರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಗರಸಭೆಯ ಸಿಬ್ಬಂದಿ ಸ್ವಪ್ನಾ ಪ್ರಾರ್ಥಿಸಿದರು. ರಾಜೇಶ್ ಸ್ವಾಗತಿಸಿ, ವಂದಿಸಿದರು. ನಿವೃತ್ತ ಶಿಕ್ಷಕ ಎಂ.ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.







