ಕಾನೂನು ಬದಲಾವಣೆಯಿಂದಾಗಿ ಹರ್ಯಾಣದಲ್ಲಿ ನಿರುದ್ಯೋಗಿಗಳಾದ ಸಾವಿರಾರು ಟ್ರಕ್ ಚಾಲಕರು

ನುಹ್,ಮೇ.11: ಹರ್ಯಾಣ ಸರಕಾರ ಮಾಡಿದ ಒಂದೇ ಒಂದು ಕಾನೂನು ಬದಲಾವಣೆಯಿಂದ ರಾಜ್ಯದಲ್ಲಿ ಸಾವಿರಾರು ಟ್ರಕ್ ಚಾಲಕರು ನಿರುದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಪರದಾಡಬೇಕಾದ ಸ್ಥಿತಿ ಉದ್ಭವವಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಹರ್ಯಾಣದಲ್ಲಿ ಟ್ರಕ್ ಚಾಲನೆ ಮಾಡುತ್ತಿದ್ದು ಹೊರರಾಜ್ಯಗಳಿಂದ ಚಾಲನಾ ಪರವಾನಿಗೆ ಪಡೆದುಕೊಂಡಿರುವವರು ಸದ್ಯ ರಾಜ್ಯದಿಂದಲೇ ಹೊಸದಾಗಿ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಮತ್ತು ಅರ್ಜಿದಾರರು ಕನಿಷ್ಟ 10ನೇ ತರಗತಿ ಕಲಿತಿರಬೇಕು ಎಂದು ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಬಿಜೆಪಿ ಸರಕಾರ 2016ರಲ್ಲಿ ಘೋಷಿಸಿತ್ತು. ಪರವಾನಿಗೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನೀಡಲು ಮುಂದಾದ ಬಿಜೆಪಿ ಸರಕಾರ ಅದಕ್ಕಾಗಿ 10ನೇ ತರಗತಿ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡನ್ನು ನೀಡುವುದು ಕಡ್ಡಾಯಗೊಳಿಸಿತ್ತು. ಸರಕಾರದ ಈ ಹೊಸ ನೀತಿಯಿಂದ ಹರ್ಯಾಣದ ನುಹ್ ಜಿಲ್ಲೆಯ ಟ್ರಕ್ ಚಾಲಕರು ತಮ್ಮ ಉದ್ಯೋಗ ಕಳೆದುಕೊಂಡು ಪರದಾಡಬೇಕಾದ ಸ್ಥಿತಿ ಉದ್ಭವವಾಗಿದೆ.
ನೀತಿ ಆಯೋಗದ ಪ್ರಕಾರ, ನುಹ್ ಜಿಲ್ಲೆಯಲ್ಲಿ ಸಾಕ್ಷರತಾ ಮಟ್ಟ ಬಹಳ ಕಡಿಮೆಯಿದೆ. ಇಲ್ಲಿ ಕೈಗಾರಿಕೆಯಾಗಲೀ ಅಥವಾ ಕೃಷಿ ಭೂಮಿಯಾಗಲೀ ಇಲ್ಲದಿರುವ ಕಾರಣ ಬಹುತೇಕ ಜನರು ಟ್ರಕ್ ಚಾಲಕರಾಗಿ ದುಡಿಯುತ್ತಾರೆ. ಇದೀಗ ಪರವಾನಿಗೆ ಪಡೆಯಲು 10ನೇ ತರಗತಿ ಕಡ್ಡಾಯಗೊಳಿಸಿರುವುದರಿಂದ ಇಲ್ಲಿನ ಜನರು ನಿರುದ್ಯೋಗಿಗಳಾಗುವಂತೆ ಮಾಡಿದೆ. ಸುಮಾರು 11 ಲಕ್ಷ ಜನಸಂಖ್ಯೆಯ ಈ ಜಿಲ್ಲೆಯಲ್ಲಿ ಒಂದು ಲಕ್ಷ ಟ್ರಕ್ ಚಾಲಕರಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಪಡೆಯಲಾದ ಅಂಕಿಅಂಶಗಳಿಂದ ತಿಳಿದುಬಂದಿದೆ. ಇನ್ನು ಹೊರರಾಜ್ಯದಿಂದ ಚಾಲನಾ ಪರವಾನಿಗೆ ಪಡೆದು ನುಹ್‌ನಲ್ಲಿ ನೆಲೆಸಿರುವ ಟ್ರಕ್ ಚಾಲಕರ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ನುಹ್‌ನ ನಿವಾಸಿಗಳೂ ಮತ ಚಲಾವಣೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಗುರುಗ್ರಾಮ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ರಾವ್ ಇಂದ್ರಜಿತ್ ಸಿಂಗ್ ಗೆಲುವು ಸಾಧಿಸಿದ್ದರು. ಆದರೆ ಅವರು ಪಡೆದ 4.5 ಲಕ್ಷ ಮತಗಳಲ್ಲಿ ನುಹ್ ಜಿಲ್ಲೆಯಿಂದ ಅವರಿಗೆ ಬಿದ್ದ ಮತಗಳ ಸಂಖ್ಯೆ ಕೇವಲ 54,000. ಸದ್ಯದ ಚುನಾವಣೆಯ ಕೊನೆಕ್ಷಣದ ಪ್ರಯತ್ನವಾಗಿ, ಚುನಾವಣೆಯ ಗೆದ್ದರೆ ಚಾಲನೆ ಪರವಾನಿಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ರಾವ್ ನುಹ್ ಜನರಿಗೆ ಭರವಸೆ ನೀಡಿದ್ದಾರೆ.
ಆದರೆ ಜಿಲ್ಲೆಯ ಜನರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಅಕೆರ ನಿವಾಸಿಯೊಬ್ಬರು ಹೇಳುವಂತೆ, ಕಳೆದ ಐದು ವರ್ಷಗಳಲ್ಲಿ ಒಬ್ಬ ರಾಜಕಾರಣಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಚುನಾವಣೆಯ ಸಮಯದಲ್ಲಿ ಬರುವ ಇವರು ಕೇವಲ ಭರವಸೆಗಳನ್ನಷ್ಟೇ ನೀಡಿ ತೆರಳುತ್ತಾರೆ. ಒಟ್ಟಾರೆ, ಸರಕಾರದ ಒಂದು ನೀತಿ ಬದಲಾವಣೆಯಿಂದ ಸಾವಿರಾರು ಟ್ರಕ್ ಚಾಲಕರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದು ಈ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯ ಮಾಹಿತಿ ಹಕ್ಕು ಹೋರಾಟಗಾರ ಹೈದರಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.







