ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಬೆಂಕಿ,ಪ್ರಯಾಣಿಕರು ಸುರಕ್ಷಿತ
ಒಡಿಶಾದಲ್ಲಿ ಸಂಭವಿಸಿದ ಅವಘಡ

ಫೋಟೊ ಕೃಪೆ: ANI
ಭುವನೇಶ್ವರ,ಮೇ 11: ಒಡಿಶಾದ ಬಾಲಾಸೋರ ಜಿಲ್ಲೆಯ ಖಂಟಪಾಡಾ ರೈಲ್ವೆ ನಿಲ್ದಾಣದ ಬಳಿ ಶನಿವಾರ ಮಧ್ಯಾಹ್ನ ಹೊಸದಿಲ್ಲಿ-ಭುವನೇಶ್ವರ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆಯಲ್ಲಿ ಬೋಗಿಗಳಿಗೆ ವಿದ್ಯುತ್ ಪೂರೈಸುವ ಜನರೇಟರ್ ಕಾರಿಗೆ ಹಾನಿಯುಂಟಾಗಿದೆ.
ರೈಲು ಖಂಟಪಾಡಾ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಜನರೇಟರ್ ಕಾರಿನಲ್ಲಿ ಬೆಂಕಿಯನ್ನು ಗಮನಿಸಿದ ಗಾರ್ಡ್ ಚಾಲಕನಿಗೆ ಮಾಹಿತಿ ನೀಡಿದ್ದ. ಚಾಲಕ ರೈಲನ್ನು ನಿಲ್ಲಿಸಿದ್ದು,ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು.
ಹಾನಿಗೀಡಾದ ಹಿಂಬದಿಯ ಜನರೇಟರ್ ಕಾರನ್ನು ಪ್ರತ್ಯೇಕಿಸಿದ ಬಳಿಕ ರೈಲು ಪ್ರಯಾಣವನ್ನು ಮುಂದುವರಿಸಿತು ಎಂದು ರೈಲ್ವೆ ಮೂಲಗಳು ತಿಳಿಸಿದವು.
Next Story





