ರಾಜ್ಯಕ್ಕೆ ಕುಲಾಂತರಿ ಬಿತ್ತನೆ ಬೀಜ ನುಸುಳದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಸಿಎಂಗೆ ಮನವಿ
ಜನಪ್ರತಿನಿಧಿಗಳು, ರೈತ ಹೋರಾಟಗಾರರ, ಸಾಹಿತಿಗಳಿಂದ ಪತ್ರ

ಬೆಂಗಳೂರು, ಮೇ 11: ರೈತರಿಗೆ, ಪರಿಸರಕ್ಕೆ ಮಾರಕವಾಗುವ ಕುಲಾಂತರಿ ಆಹಾರ ಬೆಳೆಗಳ ಬಿತ್ತನೆ ಬೀಜಗಳು ರಾಜ್ಯದೊಳಗೆ ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳು, ಸಾಹಿತಿಗಳು, ಪತ್ರಕರ್ತರು ಪರಿಸರ ವಿಜ್ಞಾನಿಗಳು, ಹೋರಾಟಗಾರರು ಎಂಡಿಎನ್ ಸಂಘಟನೆಯ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಂಸದ ಡಾ.ಎಲ್.ಹನುಮಂತಯ್ಯ, ವಿಧಾನಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ರೈತ ಹೋರಾಟಗಾರ ವೀರಸಂಗಯ್ಯ, ಚುಕ್ಕಿ ನಂಜುಂಡ ಸ್ವಾಮಿ, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ. ಎನ್.ಎಸ್.ಶಂಕರ್, ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಕೆ.ಪಿ.ಸುರೇಶ್ ಸೇರಿದಂತೆ ಹಲವರು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಪತ್ರ ಬರೆದು, ಯಾವುದೆ ಸಂದರ್ಭದಲ್ಲೂ ಕುಲಾಂತರಿ ಬೀಜಗಳು ರಾಜ್ಯಕ್ಕೆ ಬಾರದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಕುಲಾಂತರಿ ಆಹಾರ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಾಗಿಲ್ಲ. ಹಿಂದೊಮ್ಮೆ ಕುಲಾಂತರಿ ಬದನೆಯನ್ನು ಬಿಡುಗಡೆ ಮಾಡಬೇಕೆ ಬೇಡವೆ ಎಂಬ ಪ್ರಶ್ನೆ ಬಂದಾಗ ಆಗಿನ ಕೇಂದ್ರ ಸಚಿವರಾಗಿದ್ದ ಜೈರಾಮ್ ರಮೇಶ್ ದೇಶದಾದ್ಯಂತ ವಿಜ್ಞಾನಿಗಳು, ಹೋರಾಟಗಾರರು, ಸಂಘ ಸಂಸ್ಥೆಗಳಲ್ಲಿ ಚರ್ಚಿಸಿ ಬಿಟಿ ಬದನೆ ಬೆಳೆಯಲು ಅವಕಾಶವನ್ನು ನಿರಾಕರಿಸಿದ್ದರು.
ಈ ಹಿಂದೆ ಕರ್ನಾಟಕದಲ್ಲೂ ಕಾನೂನು ಬಾಹಿರವಾಗಿ ಕುಲಾಂತರಿ ಬೆಳೆ ಬೆಳೆದ ಎರಡು ಪ್ರಕರಣಗಳು ಸಿಕ್ಕಿಬಿದ್ದಿದ್ದವು. ದೊಡ್ಡಬಳ್ಳಾಪುರದ ಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕುಲಾಂತರಿ ಭತ್ತ ಬೆಳೆದು ದೊಡ್ಡ ಸುದ್ದಿಯಾಗಿತ್ತು. ಕಡೆಗೆ ಕೃಷಿ ವಿಶ್ವವಿದ್ಯಾಲಯ ತಾನು ಮಾಡಿದ ತಪ್ಪಿಗೆ ಕ್ಷಮೆ ಕೋರಿತ್ತು. ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ರೈತರೊಬ್ಬರ ಹೊಲದಲ್ಲಿ ಕುಲಾಂತರಿ ಜೋಳ ಬೆಳೆಸಿದ್ದ ಖಾಸಗಿ ಕಂಪೆನಿ ಸಿಕ್ಕಿ ಬಿದ್ದಿತ್ತು. ಆ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ಪ್ರಸಾರಗೊಂಡ ಸುದ್ದಿಯಿಂದಾಗಿ ಇದರ ವಿರುದ್ಧದ ಕಾನೂನು ಮತ್ತಷ್ಟು ಬಿಗಿಯಾಗಿದೆ.
ಆದಾಗ್ಯು, ಕುಲಾಂತರಿ ಬೀಜಗಳು ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಬಹುದೆಂಬ ಆತಂಕ ಇದ್ದೇ ಇದೆ. ಹೀಗಾಗಿ ರಾಜ್ಯದಲ್ಲಿ ಉತ್ಪಾದನೆಯಾಗುವ, ಮಾರಾಟವಾಗುವ ಮತ್ತು ಇತರೆ ಪ್ರದೇಶಗಳಿಂದ ರಾಜ್ಯಬ ಬರುವ ಬಿತ್ತನೆ ಬೀಜಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ವರ್ಗ ಹೆಚ್ಚಿನ ನಿಗಾ ಇಡಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.







