ತಿಪಟೂರು: ಬೆಟ್ಟದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು ನಾಲ್ವರು ಸಾವು
10 ಕ್ಕೂ ಹೆಚ್ಚು ಮಂದಿಗೆ ಗಾಯ

ತುಮಕೂರು, ಮೇ 11: ತಿಪಟೂರು ತಾಲೂಕಿನ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು 4 ಮಂದಿ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಇಂದು ಸಂಜೆ ನಡೆದಿದೆ.
ಮೃತರು ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದವರು ಎನ್ನಲಾಗಿದ್ದು, ಬೆಟ್ಟಕ್ಕೆ ಹರಿಸೇವೆಗೆ ತೆರಳಿ, ಹರಿಸೇವೆ ಮುಗಿಸಿ ಬಳಿಕ ಬೆಟ್ಟದಿಂದ ಇಳಿಯುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರ್ಯಾಕ್ಟರ್‌ನಲ್ಲಿ ಸುಮಾರು 20 ಮಂದಿ ಪ್ರಯಾಣಿಸುತ್ತಿದ್ದು, ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಮಗುಚಿ ಬಿದ್ದು, ಸುಮಾರು 45 ಅಡಿ ಕೆಳಗೆ ಉರುಳಿದೆ ಎಂದು ತಿಳಿದುಬಂದಿದೆ.
ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












