ಮೇ 23ರ ನಂತರ ಚರಿತ್ರೆ ಬದಲಾಗಲಿದೆ: ಸಿ.ಎಂ.ಇಬ್ರಾಹಿಂ

ಯಾದಗಿರಿ, ಮೇ 11: ಲೋಕಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೇ 23ರ ನಂತರ ಚರಿತ್ರೆಯೆ ಬದಲಾಗಲಿದೆ. ಬಿಜೆಪಿಯಿಂದಲೇ ಜನ ನಮ್ಮ ಪಕ್ಷಕ್ಕೆ ಬರಲಿದ್ದಾರೆ. ದೇಶಕ್ಕೆ ಅಚ್ಛೇ ದಿನ್ ಬರಲಿವೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಶನಿವಾರ ಚಿಂಚೋಳಿ ತಾಲೂಕಿನ ಅರಣಕಲ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರಕ್ಕೆ ಈ ಉಪ ಚುನಾವಣೆ ಬರಲು ಕಾರಣವೇನು? ಉಮೇಶ್ ಜಾಧವ್‌ಗೆ ಎಂಟು ತಿಂಗಳಲ್ಲಿ ಇದ್ದಕ್ಕಿದ್ದಂತೆ ಯಡಿಯೂರಪ್ಪ ಮೇಲೆ ಪ್ರೀತಿ ಬಂತೇ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಮಾತೆತ್ತಿದರೆ ಮೋದಿ, ಮೋದಿ ಅಂತಾರೆ. 70 ವರ್ಷಗಳ ಇತಿಹಾಸದಲ್ಲಿ ಇಂತಹ ಪ್ರಧಾನಿ ದೇಶಕ್ಕೆ ಸಿಕ್ಕಿರಲಿಲ್ಲ. ಮುಹಮ್ಮದ್ ಬಿನ್ ತುಘಲಕ್ ಚರ್ಮದಿಂದ ರೂಪಾಯಿ ಮಾಡಿಸಿದ್ದ. ಆದರೆ, ಮೋದಿ ರಾತ್ರೋರಾತ್ರಿ ಬಂದು ನೋಟ್ ಬಂದ್ ಅಂದು ಬಿಟ್ರು. ತರಕಾರಿ ಮಾರಾಟ ಮಾಡುವ ಶಾರದವ್ವ ಬಳಿ 50 ರೂ.ಗಳಿಗೆ ಕಾಯಿಪಲ್ಯ ಖರೀದಿಸಿ, ಕಾರ್ಡ್ ಕೊಟ್ಟರೆ ಆಕೆ ಏನು ಮಾಡಬೇಕು ಎಂದು ಅವರು ಹೇಳಿದರು. ಮೇ 23ರ ನಂತರ ಮೋದಿ ನೀ ಹೋದಿ, ಮತ್ತೆ ಬರುವ ಪ್ರಶ್ನೆಯೇ ಇಲ್ಲ, ಮೋದಿ ನೀ ಬೂದಿ. ನಾವು ಹೇಳಿದ್ದು ಸುಳ್ಳಾಗಲ್ಲ. ಏಕೆಂದರೆ ಇದು ಸೂಫಿ-ಸಂತರು, ವಚನಗಳನ್ನು ಹೇಳಿದ ಬಸವಣ್ಣನ ಕರ್ಮಭೂಮಿ. ನರೇಂದ್ರಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಬೀಫ್ ಮಾರಾಟದ ಪ್ರಮಾಣ ಹೆಚ್ಚಳವಾಗಿದೆ. ಸುಮಾರು 60 ಮಂದಿ ಸಂಸದರು ಬೀಫ್ ಫ್ಯಾಕ್ಟರಿಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಮೋದಿ ಊರಿಗೆ ಊರೇ ಮಾರಾಟ ಮಾಡುತ್ತಿದ್ದಾರೆ. ಇದನ್ನು ಯಾವ ರಾಷ್ಟ್ರೀಯ ಮಾಧ್ಯಮಗಳು ತೋರಿಸುವುದಿಲ್ಲ. ಆದರೆ, ಸಿದ್ದರಾಮಯ್ಯ ಕೈಗಡಿಯಾರ, ಬೂಟ್ ಹಾಕಿಕೊಂಡರೆ ಸಾಕು ನಿರಂತರವಾಗಿ ತೋರಿಸುತ್ತಾರೆ ಎಂದು ಇಬ್ರಾಹಿಂ ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ, ಯಡಿಯೂರಪ್ಪ ನೀ ಇನ್ನು ಮುಂದೆ ಮುಖ್ಯಮಂತ್ರಿ ಆಗಲ್ಲಪ್ಪ. ಈಗ ಯಡಿಯೂರಪ್ಪ ಮುಂದಿದ್ದಾರೆ. ಆದರೆ, ಕೆಲವು ದಿನಗಳಲ್ಲಿ ಬಿ.ಎಲ್. ಸಂತೋಷ್ ಮುಂದೆ, ಯಡಿಯೂರಪ್ಪ ಹಿಂದೆ ಆಗಲಿದ್ದಾರೆ ಎಂದು ಅವರು ಹೇಳಿದರು.
ಹಿಂದೂ-ಮುಸ್ಲಿಮರು ಒಂದಾಗಿ ಬಾಳುವಂತೆ ನಾನು ದೇವರಲ್ಲಿ ಪ್ರತಿನಿತ್ಯ ಪ್ರಾರ್ಥನೆ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ 1996ರಿಂದಲೂ ನಮ್ಮ ಜೊತೆ ಜನತಾ ಪಕ್ಷದಲ್ಲಿದ್ದರು. ಒಳ್ಳೆಯ ಅಭ್ಯರ್ಥಿ. ಆತನಿಗೆ ಆಶೀರ್ವಾದ ಮಾಡಿ ಎಂದು ಅವರು ಕೋರಿದರು.
ನೀವು ಯಾರು ಗಾಬರಿಯಾಗಬೇಕಾದ ಅಗತ್ಯವಿಲ್ಲ. ಐದು ವರ್ಷಗಳ ಕಾಲ ಈ ಸರಕಾರ ಇರುತ್ತೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ಕಾಲ ಬರುತ್ತದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.







