ಮನೆಗೆ ನುಗ್ಗಿದ ಚಿರತೆ ಸೆರೆ: ಚಿಕಿತ್ಸೆಗಾಗಿ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವು

ಮೈಸೂರು,ಮೇ 11: ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಎರಡರಿಂದ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಮನೆಯೊಂದಕ್ಕೆ ನುಗ್ಗಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ. ಆದರೆ ಚಿಕಿತ್ಸೆಗಾಗಿ ಸಾಗಿಸುವ ವೇಳೆ ಮಾರ್ಗಮಧ್ಯೆ ಚಿರತೆ ಸಾವನ್ನಪ್ಪಿದೆ.
ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟಿದೆ. ಇದರ ಕುತ್ತಿಗೆಯಲ್ಲಿದ್ದ ಉರುಳನ್ನು ಕತ್ತರಿಸಿ ರಕ್ಷಿಸುವ ಪ್ರಯತ್ನ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.
ನಿಂಗಣ್ಣ ಸ್ವಾಮಿ ಎಂಬವರ ಮನೆಗೆ ನುಗ್ಗಿದ ಚಿರತೆಯನ್ನು ಕೂಡಿಹಾಕುವ ವೇಳೆ ಆನಂದ ಮೂರ್ತಿ ಮತ್ತು ದಾಸಪ್ಪ ಎಂಬವರಿಗೆ ಪರಚಿ ಗಾಯಗೊಳಿಸಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದರು. ಕುತ್ತಿಗೆಗೆ ಉರುಳು ಬಿದ್ದ ಪರಿಣಾಮ ಗಾಯಗೊಂಡು ಕೀವು ತುಂಬಿತ್ತು. ಚಿರತೆ ಆಹಾರ ಸೇವಿಸದ ಸ್ಥಿತಿಗೆ ತಲುಪಿತ್ತು. ಹಿಡಿದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೃಗಾಲಯಕ್ಕೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದೆ.







