ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನ ತುರ್ತು ಭೂಸ್ಪರ್ಷ

ನಾಗಪುರ, ಮೇ 11: ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ನಾಗಪುರದಲ್ಲಿ ತುರ್ತು ಭೂಸ್ಪರ್ಷ ಮಾಡಿದ ಘಟನೆ ನಡೆದಿದೆ. ವಿಮಾನದಲ್ಲಿ 152 ಪ್ರಯಾಣಿಕರಿದ್ದರು.
ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ವಿಮಾನ ಒಂದೂವರೆ ಗಂಟೆ ವಿಳಂಬದ ಬಳಿಕ ಪ್ರಯಾಣ ಆರಂಭಿಸಿತ್ತು. ಆದರೆ ಸುಮಾರು 12:30ರ ವೇಳೆ ವಿಮಾನದಲ್ಲಿ ಇಂಧನ ಟ್ಯಾಂಕ್‌ನ ಗೇಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಷ ಮಾಡಲು ನಾಗಪುರದತ್ತ ತಿರುಗಿಸಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ನಾವೆಲ್ಲಾ ವಿಮಾನದಲ್ಲೇ ಸುಮಾರು 5 ಗಂಟೆ ಇದ್ದೆವು. ಬಳಿಕ ನಮಗೆ ವಿಮಾನದಿಂದ ಹೊರ ಹೋಗಲು ಅವಕಾಶ ನೀಡಲಾಯಿತು ಹಾಗೂ ಚಹಾ ಮತ್ತು ಉಪಹಾರ ಪೂರೈಸಲಾಗಿದೆ ಎಂದವರು ತಿಳಿಸಿದ್ದಾರೆ. ಪ್ರಯಾಣಿಕರನ್ನು ಬಳಿಕ ಮತ್ತೊಂದು ವಿಮಾನದ ಮೂಲಕ ದಿಲ್ಲಿಗೆ ಕರೆದೊಯ್ಯಲಾಗಿದೆ ಎಂದು ಸ್ಪೈಸ್‌ಜೆಟ್ ವಕ್ತಾರರು ಹೇಳಿದ್ದಾರೆ.
Next Story





