ಚೀನಾದ ಎಲ್ಲ ಆಮದಿನ ತೆರಿಗೆ ಹೆಚ್ಚಿಸಲು ಟ್ರಂಪ್ ಆದೇಶ
ವಾಶಿಂಗ್ಟನ್, ಮೇ 11: ಚೀನಾದಿಂದ ಮಾಡಿಕೊಳ್ಳಲಾಗುವ ಉಳಿದ ಬಹುತೇಕ ಎಲ್ಲ ಆಮದುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಆದೇಶ ನೀಡಿದ್ದಾರೆ.
ಸುಮಾರು 200 ಬಿಲಿಯ ಡಾಲರ್ (ಸುಮಾರು 14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಚೀನಾ ಸರಕುಗಳ ಆಮದಿನ ಮೇಲಿನ ತೆರಿಗೆಯನ್ನು ಅಮೆರಿಕ ಹೆಚ್ಚಿಸಿದ ಒಂದು ದಿನದ ಬಳಿಕ ಈ ಹೊಸ ಬೆಳವಣಿಗೆ ಸಂಭವಿಸಿದೆ.
‘‘ಚೀನಾದಿಂದ ಮಾಡಲಾಗುವ ಉಳಿದ ಎಲ್ಲ ಆಮದುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಅಧ್ಯಕ್ಷರು ನಮಗೆ ಆದೇಶ ನೀಡಿದ್ದಾರೆ. ಹೊಸ ಆಮದುಗಳ ಮೌಲ್ಯ 300 ಬಿಲಿಯ ಡಾಲರ್ (ಸುಮಾರು 21 ಲಕ್ಷ ಕೋಟಿ ರೂಪಾಯಿ) ಎಂಬುದಾಗಿ ಅಂದಾಜಿಸಲಾಗಿದೆ’’ ಎಂದು ಅಮೆರಿಕದ ವ್ಯಾಪಾರಿ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಒಪ್ಪಂದವಿಲ್ಲದೆ ವ್ಯಾಪಾರ ಮಾತುಕತೆ ಕೊನೆ
ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಮರವನ್ನು ಕೊನೆಗೊಳಿಸುವ ಉದ್ದೇಶದ ಎರಡು ದಿನಗಳ ಮಾತುಕತೆ ಶುಕ್ರವಾರ ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಅದೇ ವೇಳೆ, ಮಾತುಕತೆ ಮುರಿದುಬಿದ್ದಿಲ್ಲ ಎಂಬುದಾಗಿ ಉಭಯ ತಂಡಗಳು ಹೇಳಿವೆ. ಹಾಗಾಗಿ, ಜಾಗತಿಕ ಆರ್ಥಿಕತೆಗೆ ಆಗುವ ಹಾನಿಯನ್ನು ತಪ್ಪಿಸಲು ವಾಶಿಂಗ್ಟನ್ ಮತ್ತು ಬೀಜಿಂಗ್ ಪರಿಹಾರವೊಂದನ್ನು ಕಂಡುಹಿಡಿಯಲು ಯಶಸ್ವಿಯಾಗಬಹುದು ಎಂಬ ದುರ್ಬಲ ನಿರೀಕ್ಷೆಯೊಂದು ಉಳಿದಿದೆ.
ಮಾತುಕತೆಗಳು ಮುಂದುವರಿಯುತ್ತವೆ ಹಾಗೂ ದಂಡನಾ ಆಮದು ತೆರಿಗೆಯನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ನಿರ್ಧಾರವು ಮುಂದಿನ ಬೆಳವಣಿಗೆಯನ್ನು ಅವಲಂಬಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಮಾತುಕತೆಗಳು ಮುರಿದು ಬಿದ್ದಿಲ್ಲ: ಚೀನಾ
ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯು ಬೀಜಿಂಗ್‌ನಲ್ಲಿ ಮುಂದುವರಿಯುತ್ತದೆ ಎಂದು ಚೀನಾದ ಪ್ರಧಾನ ವ್ಯಾಪಾರ ಸಂಧಾನಕಾರ ಲಿಯು ಹೆ ಶುಕ್ರವಾರ ವಾಶಿಂಗ್ಟನ್‌ನಲ್ಲಿ ಹೇಳಿದ್ದಾರೆ. ಆದರೆ ‘ಮಹತ್ವದ ತತ್ವಗಳಲ್ಲಿ’ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
‘‘ಮಾತುಕತೆಗಳು ಮುರಿದು ಬಿದ್ದಿಲ್ಲ, ಬದಲಿಗೆ ಎರಡು ದೇಶಗಳ ನಡುವಿನ ಮಾತುಕತೆಯಲ್ಲಿ ಸಂಭವಿಸುವ ಸಾಮಾನ್ಯ ತಿರುವಷ್ಟೇ ಇದು ಆಗಿದೆ. ಅದು ಅನಿವಾರ್ಯ’’ ಎಂದು ಚೀನಾ ಮಾಧ್ಯಮಗಳೊಂದಿಗೆ ಮಾತನಾಡಿದ ಲಿಯು ಹೆ ಅಭಿಪ್ರಾಯಪಟ್ಟರು.