ಮಧ್ಯಪ್ರಾಚ್ಯಕ್ಕೆ ಇನ್ನೊಂದು ಯುದ್ಧ ನೌಕೆ, ಕ್ಷಿಪಣಿಗಳನ್ನು ಕಳುಹಿಸಿದ ಅಮೆರಿಕ
ಇರಾನ್-ಅಮೆರಿಕ ಉದ್ವಿಗ್ನತೆ ತಾರಕಕ್ಕೆ

ವಾಶಿಂಗ್ಟನ್, ಮೇ 11: ಇರಾನ್ ಹಾಕಿದೆ ಎನ್ನಲಾದ ಬೆದರಿಕೆಗಳನ್ನು ಎದುರಿಸಲು ಈಗಾಗಲೇ ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿರುವ ವಿಮಾನವಾಹಕ ಯುದ್ಧನೌಕೆಗೆ ಬೆಂಬಲವಾಗಿ, ಉಭಯಚರ ದಾಳಿ ನೌಕೆ ಮತ್ತು ಪ್ಯಾಟ್ರಿಯಟ್ ಕ್ಷಿಪಣಿ ವ್ಯವಸ್ಥೆಯೊಂದನ್ನು ಕಳುಹಿಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಪ್ರಕಟಿಸಿದೆ.
ವಲಯದಲ್ಲಿ ದಾಳಿಯೊಂದನ್ನು ನಡೆಸಲು ಇರಾನ್ ಯೋಜನೆ ರೂಪಿಸುತ್ತಿದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ, ಅಮೆರಿಕ ಈಗಾಗಲೇ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಮ್ ಲಿಂಕನ್ ಮತ್ತು ಬಿ-52 ಬಾಂಬರ್ ವಿಮಾನ ವ್ಯವಸ್ಥೆಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿರುವುದನ್ನು ಸ್ಮರಿಸಬಹುದಾಗಿದೆ.
ಈಗ ಮರೀನ್ ಸೈನಿಕರು, ಉಭಯಚರ ವಾಹನಗಳು, ಸಾಂಪ್ರದಾಯಿಕ ಲ್ಯಾಂಡಿಂಗ್ ಕ್ರಾಫ್ಟ್ ಮತ್ತು ರೋಟರಿ ವಿಮಾನಗಳು ಹಾಗೂ ಪ್ಯಾಟ್ರಿಯಟ್ ವಾಯು ರಕ್ಷಣೆ ವ್ಯವಸ್ಥೆಗಳನ್ನು ಹೊತ್ತ ಯುಎಸ್‌ಎಸ್ ಆರ್ಲಿಂಗ್ಟನ್ ನೌಕೆಯು ಕೊಲ್ಲಿಯತ್ತ ತೆರಳುತ್ತಿದೆ.
‘‘ಅಮೆರಿಕದ ಪಡೆಗಳು ಮತ್ತು ನಮ್ಮ ಹಿತಾಸಕ್ತಿಗಳ ವಿರುದ್ಧ ದಾಳಿ ನಡೆಸುವ ಇರಾನ್‌ನ ಸಿದ್ಧತೆಗಳು ಹೆಚ್ಚುತ್ತಿರುವ ಸೂಚನೆಗಳಿಗೆ ಪ್ರತಿಯಾಗಿ ಹೊಸದಾಗಿ ನಿಯೋಜನೆಗಳನ್ನು ಮಾಡಲಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಪೆಂಟಗನ್ ತಿಳಿಸಿದೆ.
‘‘ಅಮೆರಿಕ ರಕ್ಷಣಾ ಇಲಾಖೆಯು ಇರಾನ್ ಸರಕಾರ ಮತ್ತು ಅದರ ಸೇನೆಯ ಚಟುವಟಿಕೆಗಳ ಮೇಲೆ ನಿಗಾ ಇಡುವುದನ್ನು ಮುಂದುವರಿಸುತ್ತಿದೆ’’ ಎಂದಿದೆ.
‘‘ಅಮೆರಿಕವು ಇರಾನ್ ಜೊತೆ ಸಂಘರ್ಷ ಬಯಸುವುದಿಲ್ಲ. ಆದರೆ, ಅಮೆರಿಕದ ಪಡೆಗಳು ಮತ್ತು ಈ ವಲಯದಲ್ಲಿರುವ ಅದರ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನಾವು ಸಿದ್ಧರಾಗಬೇಕಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
ಮಾತುಕತೆಗೆ ಸಿದ್ಧ: ಟ್ರಂಪ್
ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ, ಇರಾನ್ ನಾಯಕತ್ವದೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
‘‘ಇರಾನ್ ನನಗೆ ಫೋನ್ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನುಡಿದರು.
‘‘ಅವರು ಪರಮಾಣು ಅಸ್ತ್ರಗಳನ್ನು ಹೊಂದುವುದನ್ನು ನಾವು ಬಯಸುವುದಿಲ್ಲ. ಇದಕ್ಕಿಂತ ಹೆಚ್ಚು ನಾವೇನೂ ಕೇಳುವುದಿಲ್ಲ’’ ಎಂದರು.







