ಸಂವಿಧಾನದ ಪರಿಕಲ್ಪನೆ ನೀಡಿದ್ದು ವಚನಕಾರರು: ಪ್ರೊ.ಎಲ್.ಎನ್.ಮುಕುಂದರಾಜ್

ಬೆಂಗಳೂರು, ಮೇ 11: ಜನ ಸಮುದಾಯ ಮತ್ತು ಪ್ರಜಾಪ್ರಭುತ್ವಕ್ಕೆ ಸಂವಿಧಾನದ ಪರಿಕಲ್ಪನೆಯನ್ನು ಮೊದಲು ನೀಡಿದವರು ವಚನಕಾರರು ಎಂದು ಲೇಖಕ ಪ್ರೊ.ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.
ಶನಿವಾರ ತಾಲೂಕಿನ ಸಿದ್ಧನಹಳ್ಳಿಯ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ರ(ರಿ) ಹಾಗೂ ಕೆಂಗಲ್ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಚನಕಾರರು ಸಮಾಜದ ಬದಲಾವಣೆಗಾಗಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ.
ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಆತ್ಮೋದ್ಧಾರದ ಮೂಲಕ ತಾತ್ವಿಕ ಚಿಂತನೆಗಳನ್ನು ಅಳವಡಿಸಿಕೊಂಡು ಅಂತರಂಗ-ಬಹಿರಂಗದಲ್ಲಿ 12ನೆ ಶತಮಾನದ ಶರಣರು ಒಂದಾಗಿದ್ದ ಕಾರಣ ಸಮಾಜ ಬದಲಾವಣೆಗಾಗಿ ಸಮಾಜೋಧಾರ್ಮಿಕ ಚಳುವಳಿ ರೂಪಗೊಂಡಿತು ಎಂದರು.
ಆಡಂಬರದ ದೇವರು ದೇವಾಲಯದ ಗೊಡ್ಡು ಸಂಪ್ರದಾಯವನ್ನು ದಿಕ್ಕರಿಸಿ ತನ್ನ ದೇಹವೆ ದೇವರೆಂದು ಭಾವಿಸಬೇಕಾದ ಸಂದರ್ಭವನ್ನು ಬಸವಣ್ಣ ತಿಳಿಸಿಕೊಟ್ಟಿದ್ದಾರೆ ಎಂದ ಅವರು, ವಚನಗಳನ್ನು ಯುವಜನತೆ ಓದುವುದರಿಂದ, ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ನಮ್ಮಲ್ಲಿಯೇ ಅಂತರಂಗ-ಬಹಿರಂಗ ಎರಡೂ ಮನಸ್ಸು ಆಹ್ಲಾದಕರವಾಗಿ ನೆಮ್ಮದಿಯ ನಾಳೆಯನ್ನು ಕಾಣಲು ಸಾಧ್ಯ ಎಂದರು.
ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ರಾಮಲಿಂಗೇಶ್ವರ(ಸಿಸಿರಾ), ಸಂಚಾಲಕ ವಸಂತ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಎಲ್.ರವೀಂದ್ರ, ಅಧ್ಯಾಪಕರಾದ ಎಂ.ಇ.ಚಂದ್ರು, ಎಸ್.ವಿನಯ್ ಕುಮಾರ್, ಪ್ರೊ.ಚಂದ್ರಯ್ಯ, ವಿದ್ಯಾರ್ಥಿನಿ ಪೂರ್ಣಿಮಾ ಹಾಜರಿದ್ದರು.







