ಮಮತಾ ಮೀಮ್ ಶೇರ್ ಮಾಡಿಕೊಂಡಿದ್ದ ಬಿಜೆಪಿ ಯುವಘಟಕದ ನಾಯಕಿಯ ಸೆರೆ

ಹೊಸದಿಲ್ಲಿ,ಮೇ 12: ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರೂಪಾಂತರಗೊಳಿಸಿದ್ದ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ತೃಣಮೂಲ ನಾಯಕರ ದೂರಿನ ಮೇರೆಗೆ ಹೌರಾದ ಬಿಜೆಪಿ ಯುವ ಘಟಕದ ಸಂಚಾಲಕಿ ಪ್ರಿಯಾಂಕಾ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅವರು 2019 ಮೆಟ್ ಗಾಲಾಕ್ಕಾಗಿ ಧರಿಸಿದ್ದ ವಿಲಕ್ಷಣ ವೇಷಭೂಷಣದ ಚಿತ್ರದಲ್ಲಿ ಅವರ ಶರೀರಕ್ಕೆ ಮಮತಾರ ಮುಖವನ್ನು ಸೇರಿಸಿ ಈ ಹಾಸ್ಯಾಸ್ಪದ ಮೀಮ್ ಅನ್ನು ರಚಿಸಲಾಗಿತ್ತು. ಶರ್ಮಾ ಮೇ 9ರಂದು ಈ ಮೀಮ್ ಅನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.
ಬಂಧಿತ ಶರ್ಮಾರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಸಾಮಾಜಿಕ ಮಾಧ್ಯಮಗಳಲ್ಲಿ ಶರ್ಮಾರನ್ನು ಬೆಂಬಲಿಸಿದ್ದಾರೆ. ತಮಾಷೆಯ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಶರ್ಮಾರನ್ನು ಬಂಧಿಸಿದ್ದು ಅವರ ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ಜನರು ಈ ಮೀಮ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಿಯಾಂಕಾ ಅವರಲ್ಲಿ ಒಬ್ಬರಾಗಿದ್ದಾರೆ. ಅವರು ಅದನ್ನು ಎಡಿಟ್ ಮಾಡಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ? ನಮ್ಮ ಮುಖ್ಯಮಂತ್ರಿಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ,ಆದರೆ ಮೀಮ್ ಅನ್ನು ಪೋಸ್ಟ್ ಮಾಡಿದ್ದಕ್ಕೆ ಬಂಧಿಸಿ ಜೈಲಿಗಟ್ಟಲಾಗುತ್ತಿದೆ ಎಂದು ಶರ್ಮಾರ ಸೋದರ ರಾಜೀವ್ ಅವರು ಸುದ್ದಿಗಾರರಿಗೆ ತಿಳಿಸಿದರು.







