ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಆರೋಪಿ ಸೆರೆ
ಮೂಡುಬಿದಿರೆ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದಲ್ಲಿ ಪಾಂಡೇಶ್ವರದ ವ್ಯಕ್ತಿಯೊಬ್ಬರನ್ನು ಮೂಡುಬಿದಿರೆ ಪೊಲೀಸರು ರವಿವಾರ ಪೋಕ್ಸೊ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ಪಾಂಡೇಶ್ವರದ ನಾರಾಯಣ ಪೂಜಾರಿಯ ಮಗ ರಂಜಿತ್ ಪೂಜಾರಿ (32)ಎಂದು ಗುರುತಿಸಲಾಗಿದೆ.
ಈತನಿಗೆ ಬೆಳುವಾಯಿಯ ಮಹಿಳೆಯೊಬ್ಬರ ಜತೆ ವಿವಾಹವಾಗಿತ್ತು. ಆ ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು ಪತಿ ಮೃತಪಟ್ಟಿದ್ದರು. ಮೊದಲ ಗಂಡನಿಗೆ ಹುಟ್ಟಿದ ಇಬ್ಬರು ಹೆಣ್ಮಕ್ಕಳಿದ್ದಾರೆ. ಮಂಗಳೂರಿನಿಂದ ಆಗಾಗ್ಗೆ ಪತ್ನಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ತನ್ನ ಪತ್ನಿಯ ಮೊದಲ ಗಂಡನಿಗೆ ಹುಟ್ಟಿದ್ದ ಅಪ್ರಾಪ್ತೆಯ ಮೈಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದ್ದು, ಇದನ್ನು ಕಂಡು ತಾಯಿ ಆಕ್ಷೇಪಿಸಿದ್ದಳು. ಮೇ 9ರಂದು ಘಟನೆ ನಡೆದಿದ್ದು ಘಟನೆಯ ಬಗ್ಗೆ ಬಾಲಕಿಯೆ ಆರೋಪಿ ವಿರುದ್ಧ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ದೂರು ನೀಡಿದ್ದು ಅಲ್ಲಿನ ಕಾರ್ಯಕರ್ತೆಯರು ಬಾಲಕಿಯನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿ ರಂಜಿತ್ ಪೂಜಾರಿಯನ್ನು ಪೊಕ್ಸೊ ಪ್ರಕರಣದಲ್ಲಿ ಬಂಧಿಸಿ ರವಿವಾರ ಮ್ಯಾಜಿಸ್ಟ್ರೇಟ್ ನಿವಾಸದ ಎದುರು ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





