ಕೆಸೆಟ್‍ನಲ್ಲಿ ತೇರ್ಗಡೆ: ವಿದ್ಯಾರ್ಥಿನಿ ಶಬಾನಾಗೆ ಕಾಲೇಜ್‍ನಿಂದ ಸನ್ಮಾನ

ಪುತ್ತೂರು: ಮೈಸೂರು ವಿಶ್ವವಿದ್ಯಾನಿಲಯವು ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆಸಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ತೇರ್ಗಡೆ ಹೊಂದಿದ ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಶಬಾನ ಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ವಿಭಾಗ ಸಂಯೋಜಕ ಪ್ರೊ. ದಿನಕರ ರಾವ್, ಪ್ರಾಧ್ಯಾಪಕರಾದ ಡಾ. ಮಂಜುಳಾ ಬಿ. ಸಿ, ಸಂಧ್ಯಾ ಎಚ್, ಪ್ರದೀಪ್ ಕೆ ಎಸ್ ಮತ್ತು ಮಹಿತಾ ಕುಮಾರಿ ಎಮ್ ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣದ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ವೃತ್ತಿ ಬದುಕನ್ನು ರೂಪಿಸಲು ವಿವಿಧ ಪೂರಕ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಸಫಲರಾಗುತ್ತಿದ್ದಾರೆ. ಈ ವಿಶಿಷ್ಟ ಸಾಧನೆಗೈದಿರುವ ಈ ವಿದ್ಯಾರ್ಥಿನಿ ಗೋಳಿತೊಟ್ಟು ನಿವಾಸಿ ಹಮೀದ್ ಪಿ ಮತ್ತು ಅಮಿನಮ್ಮ ದಂಪತಿಗಳ ಪುತ್ರಿ. ಅವರು ವಿದ್ಯಾರ್ಥಿ ಬದುಕಿನ ಅಂತಿಮ ಹಂತದಲ್ಲಿಯೇ ಉಪನ್ಯಾಸ ವೃತ್ತಿಗೆ ಆಯ್ಕೆಗೊಂಡಿದ್ದಾರೆ.





