ಭವಿಷ್ಯದ ಚಿಂತೆ, ಏಕಾಂಗಿತನದಿಂದ ಬೇಸತ್ತು ದಯಾಮರಣಕ್ಕೆ ಅನುಮತಿ ನೀಡುವಂತೆ ಯುವಕನಿಂದ ಸಿಎಂಗೆ ಮನವಿ

ಪುಣೆ, ಮೇ 12: ಭವಿಷ್ಯದ ಅಸ್ಥಿರತೆ ಹಾಗೂ ವಿವಾಹ ಅವಕಾಶದ ಕೊರತೆಯಿಂದ ಖಿನ್ನನಾಗಿರುವ 35 ವರ್ಷದ ಯುವಕನೋರ್ವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದಾನೆ.
ಈ ಪತ್ರವನ್ನು 15ರಿಂದ 20 ದಿನಗಳ ಹಿಂದೆ ಕಳುಹಿಸಲಾಗಿದೆ. ಹೆತ್ತವರಿಗೆ ಏನನ್ನೂ ಮಾಡಿಲ್ಲ ಎಂದು ಸಂಕಟವಾಗುತ್ತಿದೆ. ಭವಿಷ್ಯದ ಅಸ್ಥಿರತೆ ಹಾಗೂ ವಿವಾಹ ಅವಕಾಶದ ಕೊರತೆಯಿಂದ ಖಿನ್ನನಾಗಿದ್ದೇನೆ. ಆದುದರಿಂದ ದಯಾಮರಣಕ್ಕೆ ಅವಕಾಶ ನೀಡಿ ಎಂದು ಯುವಕ ಪತ್ರದಲ್ಲಿ ಹೇಳಿದ್ದಾನೆ ಎಂದು ದತ್ತವಾಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದೇವಿದಾಸ್ ಘೆವಾರೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಗೆ ಕಳುಹಿಸಲಾದ ಪತ್ರದಲ್ಲಿ ಯುವಕ ತನ್ನ ಅನಾರೋಗ್ಯಕ್ಕೀಡಾದ 70 ವರ್ಷದ ತಾಯಿ ಹಾಗೂ 83 ವರ್ಷದ ತಂದೆಯ ಬಗ್ಗೆ ಉಲ್ಲೇಖಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಹೆತ್ತವರಿಗೆ ಏನನ್ನೂ ಮಾಡಿಲ್ಲ ಎಂದು ಆತ ಖಿನ್ನನಾಗಿದ್ದಾನೆ. ವಿವಾಹಕ್ಕೆ ಸಂಬಂಧಿಸಿದ ಕೂಡ ಆತ ಸಮಸ್ಯೆ ಎದುರಿಸುತ್ತಿದ್ದಾನೆ. ನಾವು ಆತನೊಂದಿಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಯುವಕ ವಿದ್ಯಾವಂತ. ಉತ್ತಮ ಕುಟುಂಬಕ್ಕೆ ಸೇರಿದವ. ಆತ ವಿವಾಹದ ಕಾರಣಕ್ಕೆ ಮಾತ್ರ ಖಿನ್ನನಾಗಿಲ್ಲ. ಆತ ತನ್ನ ಹೆತ್ತವರನ್ನು ಅತಿಯಾಗಿ ಪ್ರೀತಿಸುತ್ತಾನೆ ಎಂದು ಘೆವಾರೆ ತಿಳಿಸಿದ್ದಾರೆ.







